ಬೆಂಗಳೂರು ಏ 22 ಶ್ರೀಲಂಕಾದ ಚರ್ಚ್ ಗಳು ಹಾಗೂ ಪಂಚತಾರಾ ಹೋಟೆಲ್ ಗಳ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿಯನ್ನು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಖಂಡಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಹಲವೆಡೆ ಭಯೋತ್ಪಾದನಾ ದಾಳಿ ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕುರಿತು ಸಮಗ್ರ ಸಮಾವೇಶ ನಡೆಸುವಂತೆ ಎಲ್ಲ ರಾಷ್ಟ್ರಗಳೂ ಒತ್ತಾಯಿಸಬೇಕು. ಭಾರತ ಈಗಾಗಲೇ ಆಗ್ರಹಿಸಿರುವಂತೆ ಉಗ್ರರಿಗೆ ಹಣಕಾಸು, ಶಸ್ತ್ರಾಸ್ತ್ರ ಪೂರೈಕೆ, ಆಶ್ರಯ ಕಲ್ಪಿಸುವುದೂ ಸೇರಿದಂತೆ ಎಲ್ಲ ಬಗೆಯ ಉಗ್ರ ಚಟುವಟಿಕೆಗಳನ್ನೂ ಅಪರಾಧೀಕರಿಸಬೇಕು ಎಂದು ಒತ್ತಾಯಿಸಿದರು.
ಭಯೋತ್ಪಾದನಾ ದಾಳಿಗಳನ್ನು ಖಂಡಿಸುವುದರಿಂದ ಹಾಗೂ ಪರಿಹಾರ ಧನ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಭಯೋತ್ಪಾದನೆಯ ಮೂಲೋತ್ಪಾಟನೆಯಾಗಬೇಕು. ಶಾಂತಿಯಿಲ್ಲದ ಪ್ರಗತಿಗೆ ಯಾವುದೇ ಅರ್ಥವಿಲ್ಲ ಎಂದ ಉಪ ರಾಷ್ಟ್ರಪತಿ ಶ್ರೀಲಂಕಾದ ಸರಣಿ ಸ್ಫೋಟಕ್ಕೆ ಬಲಿಯಾದ ಅಮಾಯಕರಿಗಾಗಿ ಸಂತಾಪ ಸೂಚಿಸಿದರು.
ತಾರತಮ್ಯ ರಹಿತ ಉನ್ನತ ಶಿಕ್ಷಣ ಅಗತ್ಯ ಉನ್ನತ ಶಿಕ್ಷಣವು ಜಾತಿ, ಧರ್ಮ, ಲಿಂಗ ಮೊದಲಾದ ತಾರತಮ್ಯವನ್ನು ಮೀರಿರಬೇಕು. ಸಾಮಾಜಿಕ ಸಮಾನತೆಯ ತತ್ವಗಳು, ಲಿಂಗ ಸಮಾನತೆಯ ಬಗ್ಗೆ ಕಾಳಜಿ ಅಗತ್ಯ. ಪ್ರಸ್ತುತ ವಿಶ್ವ ದಜರ್ೆಗೆ ಸರಿಸಮಾನವಾದ ಗುಣಮಟ್ಟದ ಶಿಕ್ಷಣ ನೀಡಬೇಕಿದೆ ಎಂದು ಉಪ ರಾಷ್ಟ್ರಪತಿ ಅಭಿಪ್ರಾಯಪಟ್ಟರು.
ಇಂದಿನ ದಿನಮಾನಕ್ಕೆ ತಕ್ಕಂತೆ ತಂತ್ರಜ್ಞಾನದ ಅರಿವು ಮತ್ತು ಅದರ ಜ್ಞಾನದ ಅರ್ಥವ್ಯವಸ್ಥೆಯನ್ನು ಪೂರೈಸಬಲ್ಲ ವ್ಯವಸ್ಥೆಯನ್ನು ಯುವಜನತೆ ದಿಟ್ಟತನದಿಂದ ಎದುರಿಸವಂತಹ ಉನ್ನತ ಶಿಕ್ಷಣವನ್ನು ಸಿದ್ಧಪಡಿಸಬೇಕು ಎಂದು ವೆಂಕಯ್ಯ ನಾಯ್ಡು ಸಲಹೆ ನೀಡಿದರು.
ರಾಜ್ಯಪಾಲ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವಜೂಭಾಯಿ ವಾಲಾ, ಉಪ ಕುಲಪತಿ ಪ್ರೊ. ಕೆ.ಆರ್ ವೇಣುಗೋಪಾಲ್ ಮೊದಲಾದ ಗಣ್ಯರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.