ರಾಂಚಿ, ಡಿ ೨-ದೇಶದಲ್ಲಿ ನೆಲೆಸಿರುವ ಎಲ್ಲಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಪುನರುಚ್ಚರಿಸಿದ್ದಾರೆ.
ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದರು.
2024ರ ವೇಳೆಗೆ ದೇಶದಲ್ಲಿರುವ ಎಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಲಾಗುವುದು ಎಂದು ಘೋಷಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಕ್ರಮ ವಲಸಿಗರ ಬಗ್ಗೆ ವಿಶೇಷ ಪ್ರೇಮ ಹೊಂದಿದ್ದಾರೆ. ಅಕ್ರಮ ವಲಸಿಗರು ಎಲ್ಲಿಗೆ ಹೋಗಬೇಕು ..? ಏನು ತಿನ್ನುಬೇಕು ? ಎಂದು ಪ್ರಶ್ನಿಸುವ ಮೂಲಕ ಅವರ ಬಗ್ಗೆ ಅತಿಯಾದ ಪ್ರೀತಿ ತೋರಿಸುತ್ತಾರೆ ಎಂದು ಲೇವಡಿ ಮಾಡಿದರು.
2024ರೊಳಗೆ ಎಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ. ಇದು ಈಡೇರಿಸಿಯೇ ಸಿದ್ಧ ಎಂದು ಅಮಿತ್ ಶಾ ಘೋಷಿಸಿದರು.