ರುದ್ರಭೂಮಿ ಸ್ವಚ್ಛಗೊಳಿಸುವಂತೆ ಒತ್ತಾಯ

Demand to clean the cemetery

ರುದ್ರಭೂಮಿ ಸ್ವಚ್ಛಗೊಳಿಸುವಂತೆ  ಒತ್ತಾಯ

ಬಳ್ಳಾರಿ 08:  ನಗರಕ್ಕೆ ಸಂಬಂಧಪಟ್ಟ ಸಂಗನಕಲ್ಲು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ: 167 ವಿಸ್ತೀರ್ಣ: ಸುಮಾರು 12.430 ಎಕರೆಗಳಷ್ಟು ಇರುವ ರುದ್ರಭೂಮಿಯನ್ನು ಸ್ವಚ್ಛಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ಬರ್ನರ್ ಕಟ್ಟಡದಲ್ಲಿ ಬರ್ನರ್ ಪರಿಕರಗಳನ್ನು ಹಾಕುವಂತೆ ಯುವಸೇನಾ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ನವರು ಪಾಲಿಕೆಯ ಮಹಾಪೌರರಿಗೆ ಮನವಿ ಸಲ್ಲಿಸಿದ್ದಾರೆ. 

ಸಂಗನಕಲ್ಲು ಗ್ರಾಮ ಪಂಚಾಯಿತಿ ಪರಿಧಿಯಲ್ಲಿ ಬರುವ ಸರ್ವೆ ನಂ: 167 ಈ ಭೂಮಿಯನ್ನು ಅನೇಕ ವರ್ಷಗಳ ಹಿಂದೆ ಯಾರೋ ದಾತರು ಸುಮಾರು 12.00 ಎಕರೆಗಳಷ್ಟು ಭೂಮಿಯನ್ನು ರುದ್ರಭೂಮಿಗಾಗಿ ಬಳಸಲು ನಗರ ವಾಸಿಗಳಿಗೆ ದಾನ ಮಾಡಿದ್ದಾರೆ.ಈ ಹಿಂದಿನ ಬಳ್ಳಾರಿ ಜಿಲ್ಲಾಧಿಕಾರಿಗಳಾದ ರಾಂಪ್ರಸಾದ್ ಮನೋಹರ್ ರವರು ಅಧಿಕಾರದಲ್ಲಿದ್ದಾಗ ಆಗಿನ ಹೆಚ್‌.ಕೆ.ಡಿ.ಬಿ ಅನುದಾನದಡಿಯಲ್ಲಿ ಹಣ ಬಿಡುಗಡೆ ಮಾಡಿ ಸದರಿ ರುದ್ರಭೂಮಿಯಲ್ಲಿ ಬರ್ನರ್ ಕಟ್ಟಡವನ್ನು ನಿರ್ಮಿಸಿ, ರಸ್ತೆಯ ವ್ಯವಸ್ಥೆಯನ್ನು ಕಲ್ಪಿಸಿ, ರುದ್ರಭೂಮಿಯನ್ನು ಸ್ವಚ್ಛತಾ ಕಾರ್ಯವನ್ನು ಸಹ ಮಾಡಿಸಿರುತ್ತಾರೆ. ಆದರೆ ಇಲ್ಲಿಯವರೆಗೆ ಸದರಿ ಬರ್ನರ್ ಕಟ್ಟಡದಲ್ಲಿ ಯಾವುದೇ ಪರಿಕರವನ್ನು ಅಳವಡಿಸಿರುವುದಿಲ್ಲ. ಸದರಿ ಕಟ್ಟಡವು ಬಳಸದೇ ಹಾಗೆಯೇ ಹದಗೆಟ್ಟಿದ್ದು, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದುಬಂದಿರುತ್ತದೆ.ಪಾಲಿಕೆಯ ಮಹಾಪೌರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ರುದ್ರಭೂಮಿಯ ಸ್ವಚ್ಛತೆ ಕಾರ್ಯ ಮಾಡಿಸಿ, ಸದರಿ ಬರ್ನರ್ ಕಟ್ಟಡದಲ್ಲಿ ಬರ್ನರ್ ಪರಿಕರಗಳನ್ನು ಅಳವಡಿಸುವುದರ ಜೊತೆಗೆ ಸದರಿ ರುದ್ರಭೂಮಿಯಲ್ಲಿ ವಿದ್ಯುತ್ ಕಂಬಗಳನ್ನು, ಸ್ನಾನದ ಕೊಠಡಿಗಳನ್ನು, ನೀರಿನ ವ್ಯವಸ್ಥೆ ಹಾಗೂ ಇನ್ನು ಮುಂತಾದ ಮೂಲಭೂತ ಸೌಕರ್ಯಗಳ ಒದಗಿಸುವುದರ ಜೊತೆಗೆ ಒಂದು ದೇವಸ್ಥಾನದ ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ. 

ಈ  ಸಂದರ್ಭದಲ್ಲಿ ಯುವಸೇನಾ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ, ಕಾರ್ಯಕರ್ತರಾದ ಎಸ್‌.ಕೃಷ್ಣ, ಜಿ.ಎಂ. ಭಾಷ, ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ ಶ್ರೀನಿವಾಸರೆಡ್ಡಿ.ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಉಪಸ್ಥಿತರಿದ್ದರು.