ಕಾರ್ಮಿಕರಿಗೆ ನಿವೇಶನ ಜತೆಗೆ ಮನೆ ನಿರ್ಮಿಸಿಕೊಡಬೇಕೆಂದು ಆಗ್ರಹ

Demand to build a house along with a plot for the workers

ಕಾರ್ಮಿಕರಿಗೆ ನಿವೇಶನ ಜತೆಗೆ ಮನೆ ನಿರ್ಮಿಸಿಕೊಡಬೇಕೆಂದು ಆಗ್ರಹ 

ಕಂಪ್ಲಿ 19: ಕಾರ್ಮಿಕರಿಗೆ ನಿವೇಶನ ಜತೆಗೆ ಮನೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಂಪ್ಲಿ ತಾಲೂಕು ಘಟಕದಿಂದ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ನಂತರ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಇವರಿಗೆ ಮನವಿ ಪತ್ರ ಸಲ್ಲಿಸಿದರು.  ಇಲ್ಲಿನ ಉದ್ಭವ ದೇವಸ್ಥಾನದಿಂದ ಕಾರ್ಮಿಕರು ಮೆರವಣಿಗೆ ನಡೆಸಿ, ನಂತರ ಪುರಸಭೆ ಮುಂಭಾಗದಲ್ಲಿ ಪ್ರತಿಭಟಿಸಿದರು. ತಾಲೂಕು ಅಧ್ಯಕ್ಷ ಐ.ಹೊನ್ನೂರಸಾಬ್ ಮಾತನಾಡಿ, ಕಂಪ್ಲಿ ಪಟ್ಟಣದಲ್ಲಿ ಸುಮಾರು 50-60 ವರ್ಷಗಳಿಂದ ಅತ್ಯಂತ ಅಸಂಘಟಿತ ಮತ್ತು ಅತಿ ಕಠಿಣ ಶ್ರಮದ ಬದುಕನ್ನು ಸಾಗಿಸುತ್ತಾ ಕಾರ್ಮಿಕರು ಬಂದಿದ್ದಾರೆ. ಕಟ್ಟಡ ಕಾರ್ಮಿಕರು, ಗಾರೆ ಕೆಲಸ, ಮಹಿಳಾ ಕಟ್ಟಡ ಕಾರ್ಮಿಕರು, ಎಲೆಕ್ಟ್ರಿಷನ್, ಪೇಂಟರ್, ಪಿಒಪಿ, ಟೈಲ್ಸ್‌ ವಕ್ಸ್‌, ಇಟ್ಟಂಗಿ ಬಟ್ಟಿ ಕಾರ್ಮಿಕರು, ತಳಪಾಯ, ಕಾರ್ ಪೇಂಟರ್ ಕಾರ್ಮಿಕರು ಹಲವು ವರ್ಷಗಳಿಂದ ಬಡತನದಲ್ಲೇ ಬದುಕುತ್ತಿದ್ದಾರೆ. ನಿವೇಶನ, ಮನೆ ಇಲ್ಲದೇ ಬಹುತೇಕ ಕಾರ್ಮಿಕರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.  ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಇಂದಿನ ದಿನಮಾನದಲ್ಲಿ ಕಾರ್ಮಿಕರ ಬದುಕು ಶೋಚನೀಯವಾಗಿದೆ. ನಿವೇಶನ ಮತ್ತು ಮನೆ ನೀಡುವಂತೆ 2015ರಲ್ಲಿ ಮಾನ್ಯ ಶಾಸಕರಿಗೆ, ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಸರ್ಕಾರ ಮತ್ತು ಶಾಸಕರ ಆಶ್ವಾಸನೆಗಳು ಹುಸಿಯಾಗಿವೆ. ಬಾಡಿಗೆ ಮನೆಯಲ್ಲಿ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುವ ಪರಿಸ್ಥಿತಿ ಕಾರ್ಮಿಕರದ್ದಾಗಿದೆ.  ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಖಾಲಿ ಜಾಗವಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಂಡು, ಕಾರ್ಮಿಕರಿಗೆ ನಿವೇಶನ ಮತ್ತು ಮನೆ ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನದಲ್ಲಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು. ಅಧ್ಯಕ್ಷ ಭಟ್ಟ ಪ್ರಸಾದ್ ಇವರು ಮನವಿ ಸ್ವೀಕರಿಸಿ ಮಾತನಾಡಿ, ಕಾರ್ಮಿಕರ ಸಂಕಷ್ಟ ಹಾಗೂ ಬೇಡಿಕೆಗಳನ್ನು ಆಲಿಸಿದ್ದು, ಶಾಸಕರ ಗಮನಕ್ಕೆ ತಂದು, ನಿವೇಶನ ಕೊಡಿಸಲಾಗುವುದು. ಮತ್ತು ಎರಡ್ಮೂರು ತಿಂಗಳಲ್ಲಿ ಮನೆಗಳು ಬರಲಿದ್ದು, ಅರ್ಹ ಕಾರ್ಮಿಕರಿಗೆ ಮನೆ ನೀಡಲಾಗುವುದು ಎಂದರು.  ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಪುರಸಭೆ ವ್ಯವಸ್ಥಾಪಕ ಪ್ರಶಾಂತಕುಮಾರ, ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು, ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಾಲಿಂಗ, ತಾಲೂಕು ಕಾರ್ಯದರ್ಶಿ ಆರ್‌.ನಾಗರಾಜ, ಕಾರ್ಮಿಕರಾದ ಬಂಡಿ ಬಸವರಾಜ, ಕೆ.ಮಂಜು, ಮೈಬು, ಎಂ.ನೂರು, ಖೇದರ್‌ನಾಥ, ಹೆಚ್‌.ಹೊನ್ನೂರಮ್ಮ, ಹೆಚ್‌.ಗಂಗಮ್ಮ, ನರಸಿಂಹ, ರುದ್ರ​‍್ಪ, ದೇವೇಂದ್ರ, ನಾಗರಾಜ, ಅಂಜಿನಮ್ಮ, ಪೇಂಟರ್ ನಾಗರಾಜ, ರಂಗಯ್ಯ, ಜಾಫರ್, ರಾಜು, ದಸ್ತ್‌ಗಿರಿ, ಚಂದ್ರಶೇಖರ, ಶಿವುಕುಮಾರ, ಪಾರ್ವತಿ, ಸುಂಕಪ್ಪ, ಶಾಂತರಾಜು, ಗಂಗಪ್ಪ, ಚಂದ್ರಶೇಖರ, ದೇವೇಂದ್ರ, ರವಿ.ರಾಜ, ವಲಿ ಸೇರಿದಂತೆ ಅನೇಕರಿದ್ದರು.