ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಪ್ಪು ಪಟ್ಟಿ ಧರಿಸಿ, ಅನಿರ್ದಿಷ್ಟಾವಧಿ ಮುಷ್ಕರ
ಕಂಪ್ಲಿ 10: ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ಸೇವಾ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ಕಪ್ಪು ಪಟ್ಟಿ ಧರಿಸಿ, ಗ್ರಾಮ ಆಡಳಿತ ಅಧಿಕಾರಿಗಳ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಪಟ್ಟಣದ ತಹಶೀಲ್ದಾರ್ ಕಛೇರಿ ಮುಂದೆ ನಡೆಸಲಾಯಿತು. ನಂತರ ತಾಲೂಕು ಅಧ್ಯಕ್ಷ ಹೆಚ್.ವಿ.ಮಂಜುನಾಥ ಮಾತನಾಡಿ, ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಮೊದಲ ಹಂತದ ಮುಷ್ಕರದಲ್ಲಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನೀಡಿದ ಭರವಸೆಯಂತೆ ಮುಷ್ಕರ ಹಿಂಪಡೆಯಲಾಯಿತು. ಆದರೆ, ಇಲ್ಲಿವರೆಗೂ ಗ್ರಾಮ ಆಡಳಿತ ಅಧಿಕಾರಿಗಳ ಬಹು ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇದುವೆರಗೂ ಯಾವುದೇ ಸೂಕ್ತಕ್ರಮಕೈಗೊಂಡಿಲ್ಲ. ಆದ್ದರಿಂದ ಸಂಘದ ನಿರ್ದೇಶನದಂತೆ ರಾಜ್ಯವ್ಯಾಪಿ 2ನೇ ಹಂತದ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿದೆ. ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಚಿಕ್ಕಮಂಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು, ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶ ಹಿಂಪಡೆಯಬೇಕು. ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆರ್ ನಿಯಮ 16ಎ ರ ಉಪಖಂಡ(2)ನ್ನು ಮರುಸ್ಥಾಪಿಸುವ ಜತೆಗೆ ಎಲ್ಲಾ ಇಲಾಖೆಗಳಲ್ಲಿಸುವ ಜತೆಗೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು. ಸೇವಾ ಸೌಲಭ್ಯಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು. ಕಂದಾಯ ಹಾಗೂ ಸರ್ಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು. ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಆಗುವ ಅಧಿಕಾರಿಗಳ ಕುಟುಂಬಕ್ಕೆ 50 ಲಕ್ಷ ಪರಿಹಾರ ಮಂಜೂರು ಮಾಡಬೇಕು. ಆಪತ್ತಿನ ಭತ್ಯೆ(ರಿಸ್ಕ್ ಅಲೊಯನ್ಸ್) ನೀಡಬೇಕು. ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನ ಹೆಚ್ಚುವರಿ ಮಾಡಬೇಕು. ಪ್ರಯಾಣ ಭತ್ಯೆ ದರ ಹೆಚ್ಚಿಸಬೇಕು. ರಾಜ್ಯ ಮಟ್ಟದ ಜೇಷ್ಟತೆಯನ್ನಾಗಿ ಪರಿಗಣಿಸಬೇಕು. ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯ ಕೆ.ಎಂ.ಶಿವರುದ್ರಯ್ಯ, ತಾಲೂಕು ಉಪಾಧ್ಯಕ್ಷ ಕೆ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ನಾರನಗೌಡ್ರು ಕಾಂತರಾಜ, ಖಜಾಂಚಿ ಕೆ.ಮಂಜುನಾಥ, ಮಹಿಳಾ ಉಪಾಧ್ಯಕ್ಷೆ ವನಿತಾಕುಮಾರಿ, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಲಕ್ಷ್ಮಣನಾಯ್ಕ, ಜಿಲಾನ್, ವಿ.ವೆಂಕಟೇಶ, ಮನೋಜಕುಮಾರ, ಚನ್ನಕೇಶವ, ಮಹ್ಮದ್ ರಫಿಕ್, ರಮೇಶ, ಗೀರೀಶಬಾಬು, ಅಬ್ದುಲ್ ಖಾದರ್, ಜ್ಯೋತೆಪ್ಪ, ಆಶಾ, ರೂಪಿಣಿ ಇದ್ದರು.