ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಲು ಆಗ್ರಹ: ಮಾ.1 ಬೆಂಗಳೂರು ಚಲೋ ಹೋರಾಟ
ಬಳ್ಳಾರಿ 21: ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ನ ಜಿಲ್ಲಾ ಉಪಾಧ್ಯಕ್ಷರಾದ ಶಾಂತಿಯವರು ಮಾತನಾಡುತ್ತಾ ಕಳೆದ ಮೂರು ವರ್ಷಗಳಿಂದ ರಾಜ್ಯದ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆತಿಲ್ಲ. ರಾಜ್ಯದ ಹಲವೆಡೆ ಕೆಲವು ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ 2022 ರಲ್ಲಿ ಸುಮಾರು ಶೇ. 40 ವಿದ್ಯಾರ್ಥಿಗಳಿಗೆ, 2023ರಲ್ಲಿ ಶೇ. 65 ವಿದ್ಯಾರ್ಥಿಗಳಿಗೆ, 2024 ರಲ್ಲಿ ಶೇ. 95 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲದೇ ಇರುವುದು ಶೋಚನೀಯ ಪರಿಸ್ಥಿತಿ. ಬಹುಪಾಲು ವಿದ್ಯಾರ್ಥಿಗಳಿಗೆ ಸುಮಾರು ?50 ಸಾವಿರಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ಬಾರದಿರುವುದು ಆತಂಕದ ಸಂಗತಿಯಾಗಿದೆ ವಿದ್ಯಾರ್ಥಿ ವೇತನವು ಸರ್ಕಾರದ ಭಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾ ಅಧ್ಯಕ್ಷರಾದ ಈರಣ್ಣ ಅವರು ಮಾತನಾಡುತ್ತಾ ಪ್ರಸ್ತುತ ದಿನದಲ್ಲಿ ಉನ್ನತ ಶಿಕ್ಷಣದ ವೆಚ್ಚ ಅತ್ಯಂತ ಅಧಿಕವಾಗುತ್ತಿದೆ, ಇನ್ನೊಂದೆಡೆ ಕ್ರಮೇಣವಾಗಿ ವಿದ್ಯಾರ್ಥಿ ವೇತನ ಕಡಿತಗೊಳಿಸುವುದರಿಂದ ಅಧಿಕ ಪ್ರಮಾಣದ ರೈತ ಕಾರ್ಮಿಕರನ್ನು ಒಳಗೊಂಡಂತೆ ಬಡಜನರ ಮಕ್ಕಳ ಶಿಕ್ಷಣದ ಕನಸು ಕನಸುಗಳಾಗಿ ಉಳಿದು ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ ಆದರೆ, ಇಲ್ಲಿಯವರೆಗೂ ಸಂಬಂಧಪಟ್ಟ ಸಚಿವರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಈವರೆಗೂ ಯಾವುದೇ ಕ್ರಮ ಸರ್ಕಾರ ಕೈಗೊಂಡಿಲ್ಲ. ಕ್ರಮೇಣ ರಾಜ್ಯದಲ್ಲಿ ವಿದ್ಯಾರ್ಥಿ ವೇತನವನ್ನೇ ಕಡಿತಗೊಳಿಸುವ ಪರಿಸ್ಥಿತಿ ಉಂಟಾಗುವ ಆತಂಕ ರಾಜ್ಯದ ವಿದ್ಯಾರ್ಥಿಗಳಿಗಿದೆ, ವಿದ್ಯಾರ್ಥಿವೇತನ ಅನ್ನುವುದು ವಿದ್ಯಾರ್ಥಿಗಳ ಹಕ್ಕು, ಇದನ್ನು ಕಸಿದುಕೊಳ್ಳುವ ಸರ್ಕಾರದ ನಡೆಯನ್ನು ಒಪ್ಪೋದಿಲ್ಲ ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸಿದರು. ಮುಂದಿನ ವಿದ್ಯಾರ್ಥಿ ವೇತನ ಬರೆದಿರುವ ವಿದ್ಯಾರ್ಥಿಗಳನ್ನು ಸೇರಿಸಿ ಮಾರ್ಚ್ 1ನೇ ತಾರೀಕು ಸರ್ಕಾರದ ವಿರುದ್ಧ ಬಲಿಷ್ಠ ಬೆಂಗಳೂರು ಚಲೋ ಹೋರಾಟವನ್ನು ಸಂಘಟಿಸುತ್ತೇವೆ ಈ ಹೋರಾಟದಲ್ಲಿ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿಎಸ್‌ಓ ನ ಜಿಲ್ಲಾ ಉಪಾಧ್ಯಕ್ಷರಲ್ಲಿ ಒಬ್ಬರಾದ ಉಮಾ ಅವರು ವಹಿಸಿಕೊಂಡಿದ್ದರು, ಹಾಗೂ ಜಿಲ್ಲಾ ಕಚೇರಿ ಕಾರ್ಯದರ್ಶಿ ನಿಹಾರಿಕಾ, ಮತ್ತು ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.