ಗೃಹ ಸಚಿವ ಅಮಿತ್ ಶಾ ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯ
ಗಜೇಂದ್ರಗಡ 21: ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅಪಮಾನಕರ ಮಾತುಗಳನ್ನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಬಂಧಿಸುವಂತೆ ಸಿಪಿಐಎಂ ಪಕ್ಷದ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಹೇಳಿದರು.
ಪಟ್ಟಣದ ತಹಶಿಲ್ದಾರರ ಕಾರ್ಯಾಲಯದ ಎದುರು ಗೃಹ ಸಚಿವ ಅಮಿತ್ ಶಾ ಹೇಳಿಕೆ ಹಾಗೂ ಸಿ.ಟಿ.ರವಿ ಹೇಳಿಕೆಯನ್ನು ಖಂಡಿಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಅಪಮಾನಕರ ಮಾತುಗಳು ಅತ್ಯಂತ ಖಂಡನೀಯವಾದುದು. ಈ ಮಾತುಗಳು ಅಮಿತ್ ಶಾ ಅವರ ಮನುವಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಅಂಬೇಡ್ಕರ್ ಅವರ ಬಗ್ಗೆ ಆಡಿರುವ ಅಪಮಾನಕರವಾದ ಮಾತುಗಳು ಅವರ ಮನುವಾದಿ ಪರಂಪರೆಯ ಮುಂದುವರಿಕೆಯ ಭಾಗವಾಗಿಯೇ ಬಂದಿವೆ. ಇದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಭಾರತದ ಸಂವಿಧಾನಕ್ಕೆ ಆಗಿರುವ ಅತ್ಯಂತ ಘೋರ ಅಪಮಾನವಾಗಿದೆ.
ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಮನುವಾದಿ ಅಮಿತ್ ಶಾ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯ ಪೀರು ರಾಠೋಡ ಮಾತನಾಡಿ ಗೃಹ ಸಚಿವ ಅಮಿತ್ ಶಾ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಸಂವಿಧಾನ ರಕ್ಷಣೆ ಮಾಡುವ ಬದಲು ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು ಕೂಡಲೇ ಪ್ರಧಾನಿಗಳು ಗೃಹ ಸಚಿವರ ರಾಜೀನಾಮೆ ಪಡೆದು ಕಾನೂನುಗಳನ್ನು ಕ್ರಮ ಜರುಗಿಸಬೇಕು ಎಂದರು.
ಇತ್ತೀಚೆಗೆ ವಿಧಾನಸಭೆಯ ಕಲಾಪದಲ್ಲಿಯೇ ವಿಧಾನಪರಿಷತ್ತ ಸದಸ್ಯ ಸಿ.ಟಿ ರವಿ, ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಆಡಿದ ಮಾತುಗಳು ಖಂಡನೀಯ. ಮಹಿಳೆಯರ ಬಗ್ಗೆ, ಸಂವಿಧಾನದ ಬಗ್ಗೆ ಗೌರವಿಲ್ಲದ ಇಂತಹ ಜನಪ್ರತಿನಿಧಿಗಳ ನಡೆಯನ್ನು ತೀವ್ರವಾಗಿ ಖಂಡಿಸಿ ಅವರ ಪ್ರತಿಕೃತಿ ದಹನ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯ ಮೆಹಬೂಬ್ ಹವಾಲ್ದಾರ್, ಚೆನ್ನಪ್ಪ ಗುಗಲೋತ್ತರ, ಚಂದ್ರು ರಾಠೋಡ, ಶರಣು ಮಾದರ, ಅನಿಲ ರಾಠೋಡ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.