ತೆರೆಯ ಮೇಲೂ ರಣವೀರ್ ಗೆ ಪತ್ನಿಯಾಗಲಿರುವ ದೀಪಿಕಾ

 ನವದೆಹಲಿ, ಜೂನ್ 12: ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡಿದ್ದ ಬಾಲಿವುಡ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಳೆದ ವರ್ಷವಷ್ಟೇ ಜೀವನದಲ್ಲೂ ಜೊತೆಯಾಗಿದ್ದು ಈಗ ಹಳೆಯ ಸುದ್ದಿ.  

ವಿವಾಹದ ನಂತರ ಇದೇ ಮೊದಲ ಬಾರಿಗೆ ದೀಪಿಕಾ, ರಣವೀರ್ ಮತ್ತೊಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ.  ಈ ಚಿತ್ರದಲ್ಲಿ ಕೂಡ ದೀಪಿಕಾ ರಣವೀರ್ ಗೆ ಪತ್ನಿಯಂತೆ.  

ರಣವೀರ್ ಸಿಂಗ್ ನಟಿಸುತ್ತಿರುವ ಕ್ರೀಡಾ ಹಿನ್ನೆಲೆಯ ಚಿತ್ರ '83' ತಂಡಕ್ಕೆ ದೀಪಿಕಾ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಸಂತಸವನ್ನು ರಣವೀರ್ ಅತ್ಯುತ್ಸಾಹದಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

ದೀಪಿಕಾ ಹಾಗೂ ಚಿತ್ರದ ನಿರ್ದೇಶಕ  ಕಬೀರ್ ಖಾನ್  ಅವರೊಂದಿಗಿನ ಭಾವಚಿತ್ರವನ್ನು ಹಂಚಿಕೊಂಡಿರುವ ರಣವೀರ್, 'ನನ್ನ ಪತ್ನಿಯ ಪಾತ್ರಕ್ಕೆ ನಿಜಜೀವನದ ಪತ್ನಿಯನ್ನು ಹೊರತುಪಡಿಸಿ ಇನ್ಯಾರು ಹೊಂದಿಕೆಯಾಗುತ್ತಾರೆ. 83 ಚಿತ್ರದಲ್ಲಿ ದೀಪಿಕಾ ರೋಮಿ ದೇವಿಯ ಪಾತ್ರ ನಿರ್ವಹಿಸಲಿದ್ದಾರೆ' ಎಂದು ಬಹಿರಂಗಪಡಿಸಿದ್ದಾರೆ.  

ಇದು ನನ್ನ ನಿಜ ಜೀವನದ ಹಾಗೂ ತೆರೆಯ ಮೇಲಿನ ಬದುಕಿನ ಕತೆ ಎಂದಿದ್ದಾರೆ.  

'83' ಚಿತ್ರ, 1983ರಲ್ಲಿ  ವಿಶ್ವಕಪ್ ಗೆದ್ದಿದ್ದ ಭಾರತದ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಅವರ ಕಥೆಯಾಗಿದ್ದು, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ದೇಶದ ಅತ್ಯಂತ ದೊಡ್ಡ ಕ್ರೀಡಾ ಚಿತ್ರ ಎಂದೇ ಬಿಂಬಿಸಿಕೊಂಡಿರುವ ಈ ಚಿತ್ರ 2020ರ ಏಪ್ರಿಲ್ 10ರಂದು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.  

ಈಗಾಗಲೇ ಕಪಿಲ್ ದೇವ್ ಹಾಗೂ ಪತ್ನಿ ರೋಮಿ ಕುರಿತು ಅರಿಯಲು ರಣವೀರ್, ದೀಪಿಕಾ ಕೆಲ ಕಾಲ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರಂತೆ.