ನೂರು ಹಾಸಿಗೆಯುಳ್ಳ ಆಸ್ಪತ್ರೆ ಕಟ್ಟಡ ಕಾಮಗಾರಿ ವೀಕ್ಷಿಸಿದ ಡಿಎಚ್‌ಒ ರಮೇಶ ಬಾಬು
ಕಂಪ್ಲಿ 03 : ತಾಲೂಕಿನ ನಂ.10 ಮುದ್ದಾಪುರ ಗ್ರಾಪಂಯ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿರುವ ನೂರು ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಸ್ಥಳಕ್ಕೆ ಬಳ್ಳಾರಿ ಜಿಲ್ಲಾ ಡಿಎಚ್‌ಒ ಡಾ.ವೈ.ರಮೇಶ ಬಾಬು ಅವರು ಗುರುವಾರ ಭೇಟಿ ನೀಡಿ ಪರೀಶೀಲಿಸಿದರು. ಕಂಪ್ಲಿ ಭಾಗದ ಜನರ ಹಿತದೃಷ್ಟಿಯಿಂದ ನೂರು ಹಾಸಿಗೆಯುಳ್ಳ ಆಸ್ಪತ್ರೆಯನ್ನು ಸುಮಾರು 20 ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಇಲ್ಲಿನ ಕಟ್ಟಡದಲ್ಲಿ ಇನ್ನಷ್ಟು ಬದಲಾವಣೆ ಅಗತ್ಯತೆ ಇದೆ. ಆದ್ದರಿಂದ ಇಲ್ಲಿನ ಗುತ್ತಿಗೆದಾರರಿಗೆ ಹಾಗೂ ಇಂಜಿನಿಯರಿಗೆ ಸೂಚಿಸಲಾಗಿದೆ.ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಇಲ್ಲಿನ ಆಸ್ಪತ್ರೆಯಿಂದ ಈ ಭಾಗದ ಜನತೆಗೆ ಅನುಕೂಲವಾಗಲಿದೆ. ಮತ್ತು ಕಾಂಪೌಂಡ್ ಗೋಡೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅಗತ್ಯತೆ ಇದ್ದು, ಸ್ಥಳೀಯ ಶಾಸಕರನ್ನು ಸಂಪರ್ಕಿಸಿ, ಚರ್ಚಿಸಿ, ಅಭಿವೃದ್ಧಿಗೆ ಮುಂದಾಗಲಾಗುವುದು ಎಂದರು. ನಂತರ ಇಲ್ಲಿನ ಆಸ್ಪತ್ರೆಯ ನೀಲಿ ನಕ್ಷೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಡಿಎಚ್‌ಇಒ ಈಶ್ವರ್ ದಾಸಪ್ಪ, ಟಿಎಚ್‌ಒ ಡಾ.ಅರುಣ್ ಕುಮಾರ್, ಡಾ.ಮಂಜುನಾಥ, ಎಎಂಒ .ರವೀಂದ್ರ ಕನಿಕೇರಿ, ವೈದ್ಯರಾದ ಡಾ.ವಿರೇಶ, ಡಾ.ಶ್ರೀನಿವಾಸ, ತಾಲೂಕು ಹಿರಿಯ ಆರೋಗ್ಯ ನೀರೀಕ್ಷಾಣಾಧಿಕಾರಿ ಪಿ.ಬಸವರಾಜ, ಎಇಇ ವೆಂಕಟೇಶ ರಾವ್, ಪಿಎಂಸಿ ಸುಜಯ, ಮಂಜುನಾಥ ಸೇರಿದಂತೆ ಇತರರು ಇದ್ದರು.