ಕ್ಷಯರೋಗಿಗಳ ಮಾಹಿತಿ ಸಲ್ಲಿಸಲು ಖಾಸಗಿ ಆಸ್ಪತ್ರೆಗೆ ಡಿಸಿ ಸೂಚನೆ

ಬಾಗಲಕೋಟೆ 13: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳ ಬಗ್ಗೆ ಮತ್ತು ಔಷಧಿ ಅಂಗಡಿಗಳಲ್ಲಿ ಔಷಧಿ ತೆಗೆದುಕೊಳ್ಳುವ ರೋಗಿಗಳ ಮಾಹಿತಿಯನ್ನು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪಾಲುದಾರರ ಹಾಗೂ ಟಿಬಿ ಪೋರಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಖಾಸಗಿ ವಲಯದಲ್ಲಿ ಕ್ಷಯರೋಗ ಪತ್ತೆ ಹಚ್ಚುವ ಪ್ರಕರಣಗಳ ವರದಿಗಳ ಸಂಖ್ಯೆ ಕಡಿಮೆಯಾಗುತ್ತಿರುವದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಗಳು ರೋಗ ಪತ್ತೆ ವಿಚಾರದಲ್ಲಿ ನಿರ್ಲಕ್ಷ ತೋರದೆ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳ ಮಾಹಿತಿಯನ್ನು ಕಡ್ಡಾಯವಾಗಿ ನೀಡಲು ಸೂಚಿಸಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಂಡು ಹಿಡಿದ ಕ್ಷಯರೋಗ ಪ್ರಕರಣಗಳನ್ನು ಪ್ರತಿ ತಿಂಗಳು ಕಡ್ಡಾಯವಾಗಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಬೇಕು. ನೀಡದ ಪಕ್ಷದಲ್ಲಿ ನೋಟಿಸ್ ನೀಡಬೇಕು. ನೋಟಿಸ್ ನೀಡಿದರೂ ಸಹ ಮಾಹಿತಿ ಬರದೆ ಇದ್ದ ಪಕ್ಷದಲ್ಲಿ ಕೆ.ಪಿ.ಎಂ.ಇ ಸೇಕ್ಷನ್(11) ಸೆಕ್ಷನ್ (2) ರಿಂದ 4ರ ಅನ್ವಯ ಕ್ರಮ ಜರುಗಿಸಲಾಗುವುದೆಂದರು. ಅಲ್ಲದೇ ರಾಜ್ಯ ಸರಕಾರದ ಕನರ್ಾಟಕ ಖಾಸಗಿ ವೈದ್ಯಕೀಯ ಸ್ಥಾಪನಾ ಕಾಯ್ದೆಯ ಸೆಕ್ಷನ್ 23 ರಡಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು. 

ಕ್ಷಯರೋಗಿಗಳ ಮಾಹಿತಿ ಜೊತೆಗೆ ಖಾಸಗಿ ಆಸ್ಪತ್ರೆಗಳು ತಾಯಿ ಮರಣ, ಶಿಶು ಮರಣ, ಲಸಿಕಾ ಕಾರ್ಯಕ್ರಮ ಹಾಗೂ ಎಲ್ಲ ರಾಷ್ಟ್ರೀಯ ಕಾರ್ಯಕ್ರಮಗಳ ವರದಿಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಪ್ಪದೇ ಪ್ರತಿ ಮಾಹೆ ವರದಿ ನೀಡುವಂತೆ ಎಲ್ಲ ಖಾಸಗಿ ವೈದ್ಯರಿಗೆ ಹಾಗೂ ಕೆ.ಪಿ.ಎಂ.ಇ ಅಡಿ ನೋಂದಾಯಿತ ವೈದ್ಯರಿಗೆ ಕಟ್ಟು ನಿಟ್ಟಿನ ಆದೇಶ ನೀಡಿದರು. ಇದನ್ನು ಪಾಲಿಸದಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಗಭರ್ಿಣೀಯರ ದಾಖಲಾತಿ ಬೇಗ ಆಗಬೇಕು. ಮತ್ತು ಗಂಡಾಂತರ ಗಭರ್ಿಣಿಯರನ್ನು ಗುರುತಿಸಿ ಸೂಕ್ತ ಚಿಕಿತ್ಸೆಗೆ ಒಳಪಡಿಸಬೇಕು. ತಾಯಿಂದರ ಮರಣ ಹಾಗೂ ಶಿಶು ಮರಣ ಆಗುವುದನ್ನು ತಪ್ಪಿಸಲು ಆಸ್ಪತ್ರೆಗಳಲ್ಲಿಯೇ ಹೆರಿಗೆ ಆಗುವಂತೆ ಕ್ರಮವಹಿಸಬೇಕು. ಮನೆಗಳಲ್ಲಿ ಹೆರಿಗೆ ಆಗುವದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಏಪ್ರೀಲ್ ಮಾಹೆಯಿಂದ ನವೆಂಬರ ವರೆಗೆ ಒಟ್ಟು 1255 ಕ್ಷಯರೋಗಿಗಳು ಚಿಕಿತ್ಸೆ ಪಡೆಯುತಿದ್ದಾರೆ. ಕಳೆದ ಹಾಗೂ ಪ್ರಸಕ್ತ ಸಾಲಿನ ನವೆಂಬರ ಮಾಹೆಯವರೆಗೆ ಜಿಲ್ಲೆಯಲ್ಲಿ ಕ್ಷಯರೋಗದಿಂದ 215 ಮರಣ ಹೊಂದಿವೆ. ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ವಲಯದಲ್ಲಿ 1886 ಗುರಿ ಪೈಕಿ 1357 ಪ್ರಗತಿ ಸಾಧಿಸಲಾಗಿದೆ. ಅಲ್ಲದೇ ಖಾಸಗಿ ವಲಯದಲ್ಲಿ 1796 ಗುರಿ ಪೈಕಿ 529 ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ ಮತ್ತು ಮಿಷನ್ ಇಂದ್ರಧನುಷ್ ಅಭಿಯಾನ ಅನುಷ್ಠಾನದಲ್ಲಿದ್ದು, ಲಸಿಕಾ ಕಾರ್ಯಕ್ರಮ ಶೇ.98.45 ರಷ್ಟು ಪ್ರಗತಿ ಸಾಧಿಸಲಾಗಿದೆ. ಯುನಿವರ್ಷಲ್ ಲಸಿಕಾ ಕಾರ್ಯಕ್ರಮದಡಿಯಲ್ಲಿ ಗಭರ್ಿಣಿಯರಿಗೆ ಮತ್ತು ಶಿಶುಗಳಿಗೆ ಹಾಗೂ ಮಕ್ಕಳಿಗೆ ಮಾರಕ ರೋಗಗಳ ವಿರುದ್ದ ಲಸಿಕೆಗಳನ್ನು ಹಾಕಲಾಗುತ್ತಿದ್ದು, ಇವುಗಳಲ್ಲಿ ಗಭರ್ಿಣಿಯರಿಗೆ ಟಿಟಿ ಬದಲಿಗೆ ಟಿಡಿ ಲಸಿಕೆ ಹಾಗೂ ಟಿಟಿ 10 ವರ್ಷ, ಟಿಟಿ 16 ವರ್ಷ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುತ್ತಿದೆ.ಇವುಗಳಲ್ಲದೇ ಪೊಲೀಯೋ ಹಾಗೂ ಮಹಿಳಾ ಸಂತಾನ ಹರಣ, ಪುರುಷ ಸಂತಾನ ಹರಣ ಮುಂತಾದವುಗಳನ್ನು ಕೂಡಾ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಸಾಂಕ್ರಾಮಿಕ ರೋಗ, ಕುಷ್ಠರೋಗ ಹಾಗೂ ಜಂತು ಹುಳು ನಿವಾರಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದರು. 

ಸಭೆಯಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಜಯಶ್ರೀ ಎಮ್ಮಿ, ಡಬ್ಲು.ಎಚ್.ಓನ ಡಾ.ಮುಕುಂದ ಗಲಗಲಿ, ಡಾ.ಹಿಡ್ನಳ್ಳಿ ಸೇರಿದಂತೆ ತಾಲೂಕಾ ವೈದ್ಯಾಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು.