ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿ ಉತ್ತಮ ಉದ್ಯೋಗ ಸೃಷ್ಠಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

Create good jobs locally for the youth of the district: District Collector Lakshmeepriya

ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿ ಉತ್ತಮ ಉದ್ಯೋಗ ಸೃಷ್ಠಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ 23: ಜಿಲ್ಲೆಯ ಯುವ ಜನತೆಗೆ ಅಗತ್ಯವಿರುವ ತಾಂತ್ರಿಕ ಮತ್ತು ಕೌಶಲ್ಯ ತರಬೇತಿಗಳನ್ನು ನೀಡಿ, ಅವರು ಉದ್ಯೋಗ ಅರಸಿ ಬೇರೆಡೆ ಹೋಗದಂತೆ, ಜಿಲ್ಲೆಯಲ್ಲಿಯೇ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. 

ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ನಡೆದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಐ.ಟಿ.ಐ. ಕಾಲೇಜುಗಳಲ್ಲಿ ಪ್ರಸ್ತುತ ಉದ್ಯೋಗ ವಲಯಗಳಲ್ಲಿ ಬೇಡಿಕೆ ಇರುವ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜೊತೆಗೆ, ಜಿಲ್ಲೆಯಲ್ಲಿರುವ ಸೀಬರ್ಡ್‌ ಮತ್ತು ಇತರೆ ಕಂಪೆನಿಗಳಲ್ಲಿ ಅಗತ್ಯ ಬೇಡಿಕೆ ಇರುವ ಉದ್ಯೋಗಗಳ ಕುರಿತಂತೆ ಸಂಬಂಧಪಟ್ಟ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಯನ್ನು ಪಡೆದು, ಅದಕ್ಕೆ ಸೂಕ್ತವಾದ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಜಿಲ್ಲೆಯಲ್ಲಿ ಯುವ ಜನತೆಗೆ ಉದ್ಯೋಗ ಸೃಷ್ಠಿ ಮಾಡುವಂತೆ ತಿಳಿಸಿದರು. 

ಜಿಲ್ಲೆಯಲ್ಲಿ ಇದುವರಗೆ ನಡೆದಿರುವ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ವಿವರಗಳನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಪರೀಶೀಲಿಸುವಂತೆ ಹೇಳಿದರು.ಜನವರಿ 9 ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಜಿಲ್ಲೆಯ ಯುವ ಜನತೆಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಉತ್ತಮ ಉದ್ಯೋಗ ದೊರಕಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು. 

ಯುವ ನಿಧಿ ಯೋಜನೆಯಡಿ ನೋಂದಾಯಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಪ್ರತೀ ಮಾಹೆ ನಿರುದ್ಯೋಗ ಭತ್ಯೆ ದೊರೆಯುವಂತೆ ಪರೀಶೀಲನೆ ನಡೆಸಬೇಕು. ಯೋಜನೆಗೆ ಅರ್ಜಿ ಸಲ್ಲಿಸಿ, ಪರೀಶೀಲನಾ ಹಂತದಲ್ಲಿರುವ ಅರ್ಜಿಗಳನ್ನು 10 ದಿನದಲ್ಲಿ ಪೂರ್ಣಗೊಳಿಸಿ ಅರ್ಹ ಎಲ್ಲರಿಗೂ ಯೋಜನೆಯ ಪ್ರಯೋಜನ ದೊರೆಕಿಸಬೇಕು, ಯೋಜನೆಯ ನೆರವು ಪಡೆಯಲು ತಾಂತ್ರಿಕ ತೊಂದರೆಯಿರುವ ಅಭ್ಯರ್ಥಿಗಳ ಬಗ್ಗೆ ಪರೀಶೀಲಿಸಿ ಅವುಗಳನ್ನು ಬಗೆಹರಿಸಬೇಕು, ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ವೆಬ್‌ಸೈಟ್ ನಲ್ಲಿ ಅಳವಡಿಸಲು ಸಮಸ್ಯೆಯಿರುವ ಕಾಲೇಜು ಮತ್ತು ವಿಶ್ವ ವಿದ್ಯಾಲಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸೂಚಿಸಿದರು. 

ಪಿ.ಎಂ. ವಿಶ್ವ ಕರ್ಮ ಯೋಜನೆ, ಪಿ.ಎಂ.ಸೂರ್ಯಘರ್ ಮುಫ್ತ ಬಿಜಲಿ ಯೋಜನೆ ಅನುಷ್ಠಾನ, ಡೇ-ನಲ್ಮ್‌ ಅಡಿಯಲ್ಲಿ ಬರುವ ಪಿಎಂ ಸ್ವನಿಧಿ ಯೋಜನೆಗಳ ಕುರಿತಂತೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.ಸಭೆಯಲ್ಲಿ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಡಿ.ಟಿ.ನಾಯ್ಕ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.