ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿ ಉತ್ತಮ ಉದ್ಯೋಗ ಸೃಷ್ಠಿಸಿ: ಜಿಲ್ಲಾಧಿಕಾರಿ
ಕಾರವಾರ. 23 :- ಜಿಲ್ಲೆಯ ಯುವ ಜನತೆಗೆ ಅಗತ್ಯವಿರುವ ತಾಂತ್ರಿಕ ಮತ್ತು ಕೌಶಲ್ಯ ತರಬೇತಿಗಳನ್ನು ನೀಡಿ, ಅವರು ಉದ್ಯೋಗ ಅರಸಿ ಬೇರೆಡೆ ಹೋಗದಂತೆ, ಅವರಿಗೆ ಜಿಲ್ಲೆಯಲ್ಲಿಯೇ ಉತ್ತಮ ವೇತನ ದೊರೆಯುವ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ನಡೆದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಐ.ಟಿ.ಐ. ಕಾಲೇಜುಗಳಲ್ಲಿ ಪ್ರಸ್ತುತ ಉದ್ಯೋಗ ವಲಯಗಳಲ್ಲಿ ಬೇಡಿಕೆ ಇರುವ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜೊತೆಗೆ, ಜಿಲ್ಲೆಯಲ್ಲಿರುವ ಸೀಬರ್ಡ್ ಮತ್ತು ಇತರೆ ಕಂಪೆನಿಗಳಲ್ಲಿ ಅಗತ್ಯ ಬೇಡಿಕೆ ಇರುವ ಉದ್ಯೋಗಗಳ ಕುರಿತಂತೆ ಸಂಬಂಧಪಟ್ಟ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಯನ್ನು ಪಡೆದು, ಅದಕ್ಕೆ ಸೂಕ್ತವಾದ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಜಿಲ್ಲೆಯಲ್ಲಿ ಯುವ ಜನತೆಗೆ ಉದ್ಯೋಗ ಸೃಷ್ಠಿ ಮಾಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಇದುವರಗೆ ನಡೆದಿರುವ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ವಿವರಗಳನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮೇಳದಲ್ಲಿ ಉದ್ಯೋಗ ಪಡೆದಿರುವ ಯುವಕರ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಪರೀಶೀಲಿಸುವಂತೆ ಹೇಳಿದರು.
ಜನವರಿ 9 ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಜಿಲ್ಲೆಯ ಯುವ ಜನತೆಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಉತ್ತಮ ಉದ್ಯೋಗ ದೊರಕಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಯುವ ನಿಧಿ ಯೋಜನೆಯಡಿ ನೋಂದಾಯಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಪ್ರತೀ ಮಾಹೆ ನಿರುದ್ಯೋಗ ಭತ್ಯೆ ದೊರೆಯುವಂತೆ ಪರೀಶೀಲನೆ ನಡೆಸಬೇಕು. ಯೋಜನೆಗೆ ಅರ್ಜಿ ಸಲ್ಲಿಸಿ, ಪರೀಶೀಲನಾ ಹಂತದಲ್ಲಿರುವ ಅರ್ಜಿಗಳನ್ನು 10 ದಿನದಲ್ಲಿ ಪೂರ್ಣಗೊಳಿಸಿ ಅರ್ಹ ಎಲ್ಲರಿಗೂ ಯೋಜನೆಯ ಪ್ರಯೋಜನ ದೊರೆಕಿಸಬೇಕು, ಯೋಜನೆಯ ನೆರವು ಪಡೆಯಲು ತಾಂತ್ರಿಕ ತೊಂದರೆಯಿರುವ ಅಭ್ಯರ್ಥಿಗಳ ಬಗ್ಗೆ ಪರೀಶೀಲಿಸಿ ಅವುಗಳನ್ನು ಬಗೆಹರಿಸಬೇಕು, ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ವೆಬ್ಸೈಟ್ ನಲ್ಲಿ ಅಳವಡಿಸಲು ಸಮಸ್ಯೆಯಿರುವ ಕಾಲೇಜು ಮತ್ತು ವಿಶ್ವ ವಿದ್ಯಾಲಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸೂಚಿಸಿದರು.
ಪಿ.ಎಂ. ವಿಶ್ವ ಕರ್ಮ ಯೋಜನೆ, ಪಿ.ಎಂ.ಸೂರ್ಯಘರ್ ಮುಫ್ತ ಬಿಜಲಿ ಯೋಜನೆ ಅನುಷ್ಠಾನ, ಡೇ-ನಲ್ಮ್ ಅಡಿಯಲ್ಲಿ ಬರುವ ಪಿಎಂ ಸ್ವನಿಧಿ ಯೋಜನೆಗಳ ಕುರಿತಂತೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಡಿ.ಟಿ.ನಾಯ್ಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಉಚಿತ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ 23 :-ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಾಗಿ ಜನವರಿ ತಿಂಗಳಲ್ಲಿ ಟ್ರಾವೆಲ್ ಮತ್ತು ಟೂರಿಸ್ಟ್ ಗೈಡ್ ಹಾಗೂ ಫೆಬ್ರವರಿ ತಿಂಗಳಲ್ಲಿ ಮೊಬೈಲ್ಫೋನ್ ರಿಪೇರಿ ಮತ್ತು ಸರ್ವಿಸಿಂಗ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸವನ್ನು ನೋಂದಾಯಿಸಿಕೊಳ್ಳಲು ಜನವರಿ 10 ಕೊನೆಯ ದಿನವಾಗಿದೆ. ತರಬೇತಿ ಅವಧಿಯಲ್ಲಿ ಊಟ ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ, ಸಾಧನಾ ಪ್ರೇರಣಾ ತರಬೇತಿ, ಉದ್ಯಮಶೀಲತೆಯ ದಕ್ಷ ಗುಣಗಳು, ಹೊಸ ಉದ್ಯಮದ ಸ್ಥಾಪನೆ ಬಗ್ಗೆ ಮಾಹಿತಿ, ಮಾರುಕಟ್ಟೆ ಸಮೀಕ್ಷೆ, ಮಾರಾಟ ತಂತ್ರಗಳು, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ, ಬ್ಯಾಂಕಿನಿಂದ ಸಾಲ ಪಡೆದು ಸ್ವಉದ್ಯೋಗ ಪ್ರಾಂಭಿಸಲು ಬೇಕಾದ ಜ್ಞಾನ, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8217236973, 9483485489, 9482188780 ನ್ನು ಸಂಪರ್ಕಿಸಬಹುದು ಎಂದು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ ಮುಂದೂಡಿಕೆ
ಕಾರವಾರ, 23 :-ಜಿಲ್ಲೆಯ ಕಾರವಾರದಲ್ಲಿ ಡಿ. 26 ರಂದು ನಡೆಸಲು ಉದ್ದೇಶಿಸಿದ್ದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.