‘ಹೆಣ್ಣು ಸಮಾಜದ ಮುಖ್ಯವಾಹಿನಿಗೆ ಬರಲು ವೇದಿಕೆ ಕಲ್ಪಿಸಿ’

Create a platform for women to come into the mainstream of society.

‘ಹೆಣ್ಣು ಸಮಾಜದ ಮುಖ್ಯವಾಹಿನಿಗೆ ಬರಲು ವೇದಿಕೆ ಕಲ್ಪಿಸಿ’ 

ವಿಜಯಪುರ 25: ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಸಿಗುವ ಗೌರವ ಬೇರಾವ ಸಂಸ್ಕೃತಿಯಲ್ಲಿ ಸಿಗುವುದು ವಿರಳ. ಅದರಂತೆ ವೇದಗಳ ಕಾಲದ ಹೆಣ್ಣಿಗೂ ಇಂದಿನ ನಾರಿಯರಿಗೂ ಹೋಲಿಸಿದರೆ ಸ್ತ್ರೀ-ಹೆಣ್ಣು ಇಂದು ತುಂಬಾ ಬದಲಾಗಿದ್ದಾಳೆ. ಜನಪದ ಸಾಹಿತ್ಯದಲ್ಲಿ ಹೆಣ್ಣನ್ನು ಮನೆ ಮನೆಯ ದೀಪ ಉರಿಸಿ, ಹೊತ್ತೊತ್ತಿಗೆ ಅನ್ನ ಉಣಿಸಿ, ತಂದೆ-ಮಗನ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? “ ಎಂಬ ಸಾಲುಗಳಲ್ಲಿ ಸ್ತ್ರೀಯ ತ್ಯಾಗಮಯಿ ಜೀವನ-ಬದುಕು, ಪ್ರೀತಿ, ವಾತ್ಸಲ್ಯ, ಮಮತೆ ಮತ್ತು ಸಾಧನೆಯನ್ನು ಭಾವನಾತ್ಮಕವಾಗಿ ವರ್ಣಿಸಲಾಗಿದೆ. ಮಹಿಳೆಯು ಪುರುಷನಂತೆ ಶಿಕ್ಷಣ, ಸ್ವಾತಂತ್ರ್ಯ, ಹಕ್ಕು, ಅವಕಾಶ ಮತ್ತು ಅಭಿಪ್ರಾಯಗಳಿಗೆ ಸೂಕ್ತ ಮನ್ನಣೆ ಪಡೆದು ತನ್ನಲ್ಲಿರುವ ಜ್ಞಾನ, ಕಲೆ, ಪ್ರತಿಭೆ, ಕೌಶಲ್ಯ, ಕುಶಲಗಾರಿಕೆ, ನೈಪುಣ್ಯತೆ, ಕಾರ್ಯತತ್ಪರತೆ ಮತ್ತು ಕಾರ್ಯದಕ್ಷತೆಯಂತಹ ಶಕ್ತಿ-ಸಾಮರ್ಥ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಹಿಳೆಗೆ ಎಲ್ಲ ಹಂತದವರೆಗೆ ಶಿಕ್ಷಣ ದೊರೆತಾಗ ಮಾತ್ರ ಆಕೆ ತನಗೆ ದೊರೆಯುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲು ಹಾಗೂ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದು ಸರೋಜಾ ಬಾಗಲಕೋಟ ಅಭಿಪ್ರಾಯಪಟ್ಟರು. 

ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್‌.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ದಿ.24ರಂದು ಸಂಜೆ ಜರುಗಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.  

ಎಲ್ಲರಿಗಾಗಿ ಶಿಕ್ಷಣ; ಶಿಕ್ಷಣಕ್ಕಾಗಿ ಎಲ್ಲರೂ ಎಂಬ ತತ್ವದಡಿಯಲ್ಲಿ ಮಹಿಳೆಗೆ ಶಿಕ್ಷಣ ಪಡೆಯುವ ಹಕ್ಕು ಒಂದು ಮೂಲಭೂತ ಹಕ್ಕಿನ ಮಾನ್ಯತೆ ನೀಡಿದೆ. ಇಂದು ಸ್ತ್ರೀ-ಮಹಿಳೆಯು ಎಲ್ಲ ಹಂತದ ಶಿಕ್ಷಣವನ್ನು ಪಡೆಯುವದರ ಮೂಲಕ ತನ್ನಲ್ಲಿರುವ ಕಲಿಕ ಶಕ್ತಿ, ಪಡೆದ ಜ್ಞಾನ, ವೈಚಾರಿಕತೆ, ಕ್ರೀಯಾಶೀಲತೆ, ಚಿಂತನಾಶೀಲತೆ, ಕೌಶಲ್ಯಗಳು ಅವಳಿಗೆ ಉತ್ತಮ ಶೈಕ್ಷಣಿಕ ವಾತಾವರಣವು ದೊರೆತು ಅವಳಿಗೆ ವಿಭಿನ್ನ ಅವಕಾಶಗಳು ದೊರೆಯುತ್ತಿರುವದಕ್ಕೆ ಅವಳ ಸಾಧನೆಯೇ ಸಾಕ್ಷಿಯಾಗಿದೆ. ಅಡುಗೆ ಮನೆ ಕೆಲಸ-ಕಾರ್ಯಗಳಿಗೆ ಮಾತ್ರ ಸೀಮೀತವಾಗಿದ್ದ ಆಕೆ ಇಂದು ತಾನು ಇತರರಂತೆ ಎಲ್ಲದರಲ್ಲಿಯೂ ಸಮರ್ಥಳು ಮತ್ತು ಸಾಧಕಳು ಎಂಬುದನ್ನು ಸಾಬೀತುಪಡಿಸಿದ್ದಾಳೆ ಎಂದರು. 

ಯೋಗ ಶಿಕ್ಷಕಿ ಕಲ್ಪನಾ ರಜಪೂರ ಅವರು ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಜೀವನ ಸವೆಯುವ, ಕೇವಲ ಅಡುಗೆ ಮನೆ ಕಾರ್ಯಗಳಿಗೆ ಮಾತ್ರ ಸಿಮೀತವಾಗಿರುವ ಸ್ತ್ರೀ-ಮಹಿಳೆಯು ಇಂದು ಸರ್ವ ಶಿಕ್ಷಣ ಅಭಿಯಾನ ಮತ್ತು ಸರಕಾರವು ಹೆಣ್ಣು ಮಕ್ಕಳಿಗಾಗಿಯೇ ವಿಶೇಷವಾಗಿ ರೂಪಿಸಿರುವ ಉಚಿತ ಶಿಕ್ಷಣದಂತಹ ಮಹತ್ವಾಕಾಂಕ್ಷೆ ಯೋಜನೆಗಳಿಂದ ಮನೆಯ ಹೊಸ್ತಿಲಿನಿಂದ ಹೊರಬಂದು ಉನ್ನತ ಶಿಕ್ಷಣ ಪಡೆಯುವಂತಾಗಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಮಹಿಳೆ ತಾನೂ ಶಿಕ್ಷಣ ಪಡೆದು ಪ್ರತಿಯೊಂದು ಮನ, ಮನೆ, ಕುಟುಂಬ, ಸಮಾಜವನ್ನು ಬೆಳಗಿಸಲು ಹಾಗೂ ಭಾವೀ ಭವ್ಯ ಭಾರತದ ಮುಂದಿನ ಕುಡಿಗಳಲ್ಲಿ ಮೌಲ್ಯಗಳನ್ನು ಒಡಮೂಡಿಸಿ, ದೇಶದ ಸತ್ಪ್ರಜೆಗಳಾಗಿ ರೂಪಿಸಬೇಕಾಗಿರವವಳು ಹೆಣ್ಣು. ಆದ್ದರಿಂದ ಹೆಣ್ಣು ಸಮಾಜದ ಕಣ್ಣು ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ನಾಣ್ಣುಡಿಯಂತೆ, ಮಹಿಳೆಗೆ ಇನ್ನು ಶಿಕ್ಷಣ ನೀಡುವದರ ಜೊತೆಗೆ ಆಕೆಯು ಎಲ್ಲ ಪುರುಷರಿಗೆ ಸಮಾನವಾಗಿ ಬೆಳೆಯಲು ಹಾಗೂ ಸಾಧನೆಯನ್ನು ತೋರಲು ಸೂಕ್ತ ಅವಕಾಶವನ್ನು ಒದಗಿಸಬೇಕಾಗಿರುವದು ಇಂದಿನ ಅಗತ್ಯತೆಯಾಗಿದೆ ಎಂದು ಹೇಳಿದರು.  

ಎನ್‌.ಜಿ.ಓ. ಕಾಲನಿ ಅಕ್ಕನ ಬಳಗದ ಸದಸ್ಯರಾದ ಸಿದ್ದಮ್ಮ ಪಾಟೀಲ, ರೇವತಿ ಬುದ್ನಿ, ಭಾರತಿ ಪಾಟೀಲ, ಸರೋಜಿನಿ ಬಿರಾದಾರ, ಭಾರತಿ ಬಿರಾದಾರ, ಪ್ರೇಮಾ ಕನ್ನೂರ, ಶಾಂತಾ ಹಿರೇಮಠ, ಶ್ರೀದೇವಿ ಖೊದ್ನಾಪೂರ, ಮಂಜುಳಾ ಜೋಶಿ, ಮಹಾದೇವಿ ಪಾಟೀಲ, ಮಹಾಂತೇಶ್ವರಿ ಪಾಟೀಲ, ಸಾವಿತ್ರಿ ಮಠಪತಿ, ಜ್ಯೋತಿ ಪಾಟೀಲ ಇನ್ನಿತರರು ಸಹ ಉಪಸ್ಥಿತರಿದ್ದರು.