ಸತತ ಪ್ರಯತ್ನವೇ ಸಾಧನೆಗೆ ರಹದಾರಿ

Continuous effort is the path to success.

ಸತತ ಪ್ರಯತ್ನವೇ ಸಾಧನೆಗೆ ರಹದಾರಿ 

ವಿಜಯಪುರ  8 : ಇಂದಿನ ಸ್ಪರ್ಧಾತ್ಮಕ ಪೈಪೋಟಿಯಂತಹ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕ ಮತ್ತು ಪದವಿ ಪಡೆದರೆ ಮಾತ್ರ ಸಾಲದು. ಪದವಿಯ ಜೊತೆಗೆ ವಿಷಯ ಜ್ಞಾನ ಭಾಷಾ ಪಾಂಡಿತ್ಯ ವಿಶ್ಲೇಷಣಾ ಮನೋಭಾವ ತಾರ್ಕಿಕ ಶಕ್ತಿ ಸಂವಹನ ಕೌಶಲ್ಯ ಸಂದರ್ಶನ ಕಲೆ ಮತ್ತು ಕ್ರಿಯಾಶೀಲತೆ-ಸೃಜನಶೀಲತೆಯಂತಹ ಗುಣ ವೈಶಿಷ್ಟ್ಯತೆಗಳನ್ನು ಹೊಂದಿರಲೇಬೇಕು. ಅದರಲ್ಲೂ ವಿಶೇಷವಾಗಿ ಕಂಪ್ಯೂಟರ್ ಆಧಾರಿತವಾಗಿ ನಡೆಯಲಿರುವ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಿ ಉದ್ಯೋಗವಂತರಾಗಲು ಸಮಯ ನಿರ್ವಹಣೆ, ಗಣಿತಶಾಸ್ತ್ರದ ಹಿನ್ನೆಲೆ ಕಂಪ್ಯೂಟರ ಜ್ಞಾನ ಆಂಗ್ಲಭಾಷೆಯ ಮೇಲಿನ ಹಿಡಿತ ಹಾಗೂ ಟ್ಯಾಲಿ ಏಸ್ ಮತ್ತು ಇನ್ನಿತರ ಲೆಕ್ಕಶಾಸ್ತ್ರಕ್ಕೆ ಸಂಬಂಧಿಸಿದ ಸಾಫ್ಟವೇರ್‌-ಪ್ರೊಗ್ರ್ಯಾಮ್ ಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವುದು ಅತಿ ಅವಶ್ಯಕವಾಗಿದೆ ಎಂದು ವಿಜಯಪುರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪುಂಡಲೀಕ ಮಾನವರ ಅಭಿಪ್ರಾಯಟ್ಟರು.  

ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ಲೇಸಮೆಂಟ್ ಸೆಲ್ ಹಾಗೂ ಐ.ಕ್ಯೂ.ಎ.ಸಿ ಘಟಕಗಳ ಸಹಯೋಗದಲ್ಲಿ ಇತ್ತೀಚೆಗೆ ಜರುಗಿದ “ಐದು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಿಳುವಳಿಕೆ ಕಾರ್ಯಕ್ರಮ” ವನ್ನು ಸಸಿಗೆ ನೀರುಣಿಸುವದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ಉನ್ನತ ಹುದ್ದೆಗಳಾದ ಐ.ಎ.ಎಸ್‌. ಐ.ಪಿ.ಎಸ್ ಕೆ.ಎ.ಎಸ್ ಮತ್ತು ಇನ್ನಿತರ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಲು ಪ್ರಚಲಿತ ವಿದ್ಯಮಾನ ಸಾಮಾನ್ಯ ಜ್ಞಾನ, ರಿಜನಿಂಗ ಎಬಿಲಿಟಿ, ಅಪ್ಟಿಟ್ಯುಡ್ ಟೆಸ್ಟ್‌, ವಿಶ್ಲೇಷಣಾ, ವಿಷಯ ಅರ್ಥಗ್ರಹಿಕಾ ಸಾರ್ಮರ್ಥ್ಯ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳ ಜ್ಞಾನವನ್ನು ಹೊಂದಿರಬೇಕು. ಐ.ಬಿ.ಪಿ.ಎಸ್‌. ಸಂಸ್ಥೆಯಿಂದ ನಡೆಸಲ್ಪಡುವ ಬ್ಯಾಂಕಿಂಗ್ ಪರೀಕ್ಷೆಗಳಾದ ಕ್ಲರಿಕಲ್ ಪ್ರೋಬೇಷನರಿ ಆಫೀಸರ​‍್ಸ‌ ಮತ್ತು ವ್ಯವಸ್ಥಾಪಕ ಹುದ್ದೆಗಳಂತಹ ಉದ್ಯೋಗಾವಕಾಶಗಳು ವಿಫುಲವಾಗಿರುವದರಿಂದ ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಅನುಗುಣವಾಗಿ ಸ್ಟಡಿ ಮಟೀರಿಯಲ್ ಸಂಗ್ರಹಿಸುವುದು ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಮತ್ತು ಗುಂಪು ಚರ್ಚೆಗಳಲ್ಲಿ ಭಾಗವಹಿಸುವದರ ಮೂಲಕ ಸತತ ಅಧ್ಯಯನ ಕಠಿಣ ಪರಿಶ್ರಮ ಪರೀಕ್ಷೆ ಎದುರಿಸಬಲ್ಲನೆಂಬ ಆತ್ಮವಿಶ್ವಾಸ ಸಕಾರಾತ್ಮಕ ಆಲೋಚನೆ ಮತ್ತು ಸಾಧಿಸಬಲ್ಲನೆಂಬ ದೃಢ ನಂಬಿಕೆಯೊಂದಿಗೆ ಪ್ರಯತ್ನಶೀಲರಾದರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು ಎಂದರು.  

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ ಅವರು ಮಾತನಾಡಿ  ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿರುವ ಜಾಣ್ಮೆ-ಪ್ರತಿಭೆ ಅನಾವರಣಗೊಳ್ಳಲು ಮತ್ತು ಸ್ಪರ್ಧಾತ್ಮಕತೆ ಮನೋಭಾವ ಬೆಳೆಯಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಯಶಸ್ಸು ಹೊಂದುವಲ್ಲಿ ಕಾಲೇಜಿನ ಪ್ಲೇಸಮೆಂಟ್ ಸೆಲ್ ಹಮ್ಮಿಕೊಂಡ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ಉದ್ಯೋಗ-ಮಾರ್ಗದರ್ಶನ ಮತ್ತು ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರಸ್ತುತ ವಿದ್ಯಾರ್ಥಿದೆಸೆಯಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದುತ್ತಾ ಪದವಿ ವ್ಯಾಸಂಗದ ಜೊತೆಗೆ ಪ್ರಸ್ತುತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪೂರ್ವ ತಯಾರಿ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ದೊರೆಯುವ ಉದ್ಯೋಗಾವಕಾಶಗಳ ಬಗ್ಗೆ ಇಂತಹ ಕಾರ್ಯಾಗಾರಗಳ ಮೂಲಕ ಅರಿವು ಮೂಡಿಸುವುದು ಪ್ರಮುಖ ಉದ್ಧೇಶವಾಗಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಪ್ಲೇಸಮೆಂಟ್ ಘಟಕದಿಂದ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಪದವಿ ಪೂರೈಸಿದ ನಂತರ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಬೇಕೆಂದರು.  

ಈ ತಿಳುವಳಿಕೆ ಕಾರ್ಯಕ್ರಮದಲ್ಲಿ ಪ್ರತಿದಿನ ಕನ್ನಡ, ಇಂಗ್ಲೀಷ್ ಅರ್ಥಶಾಸ್ತ್ರ ಇತಿಹಾಸ ವಿಜ್ಞಾನ ಸಾಮಾನ್ಯ ಜ್ಞಾನ ಮೆಂಟಲ್ ಎಬಿಲಿಟಿ ರಾಜ್ಯಶಾಸ್ತ್ರ ಮತ್ತು ಭಾರತೀಯ ಸಂವಿಧಾನ ವಿಷಯಗಳ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿಲಾಯಿತು. ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಆರ್‌.ಎಸ್‌.ಕುರಿ, ಸಹ ಸಂಚಾಲಕ ಪ್ರೊ. ವಲ್ಲಭ ಕಬಾಡೆ, ಪ್ರೊ. ಎಸ್‌.ಎಸ್‌.ಯರನಾಳ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.  

ಸಮಾರಂಭದಲ್ಲಿ ಪ್ಲೇಸಮೆಂಟ್ ಸೆಲ್ ಸಂಯೋಜಕ ಪ್ರೊ. ಎಸ್‌.ಎಸ್‌.ಯರನಾಳ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾ ಬಿರಾದಾರ ಪಾರ್ಥಿಸಿದರು. ಡಾ. ದೇವೆಂದ್ರಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಎಂ.ಎಸ್‌.ಖೊದ್ನಾಪೂರ, ಡಾ. ಬಿ.ಎನ್‌.ಶಾಡದಳ್ಳಿ ಪ್ರೊ. ಎಸ್‌.ಡಿ.ತೋಂಟಾಪೂರ ಡಾ. ಶಿವಾನಂದ ಜಮಾದಾರ ಡಾ. ರೋಹಿಣಿ ಹಿರೇಶೆಡ್ಡಿ, ಪ್ರೊ. ಕೇಶವಮೂರ್ತಿ ವಿನೋದ ಹುಲ್ಲೂರ ಉಮೇಶ ಹಿರೇಮಠ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.