ಎಲ್ಲಾ ಪ್ರಜೆಗಳಿಗೆ ಸಂವಿಧಾನವೇ ಪವಿತ್ರ ಗ್ರಂಥ : ಎ.ಅಕ್ಕಮಹಾದೇವಿ
ಕಂಪ್ಲಿ 27: ಭಾರತ ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನ ಹೊಂದಿದ ದೇಶವಾಗಿದೆ ಎಂದು ಶಿಕ್ಷಕಿ ಎ.ಅಕ್ಕಮಹಾದೇವಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕೋಟೆಯಲ್ಲಿ ಸ್ವಾಮಿ ವಿವೇಕಾನಂದ ಶಾಲೆಯಿಂದ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ನಡೆಸುವ ಆಡಳಿತವೇ ಪ್ರಜಾ ಪ್ರಭುತ್ವ. ಪ್ರಜಾಪ್ರಭುತ್ವವ ಜಾತ್ಯಾತೀಯತೆಯನ್ನು ಎತ್ತಿ ಹಿಡಿಯುತ್ತದೆ. ನಮ್ಮ ಸಂವಿಧಾನ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂದು ಮೂರು ಅಂಗಗಳಾಗಿ ವಿಭಜಿಸಲಾಗಿದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನು ಸಹ ಸಂವಿಧಾನಕ್ಕೆ ಅನುಗುಣವಾಗಿರಬೇಕು.
ಭಾರತ ದೇಶದ ಎಲ್ಲಾ ಪ್ರಜೆಗಳಿಗೆ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ಬಂದಿದೆ. ದುರ್ಬಲ ವರ್ಗದವರು, ಹಿಂದುಳಿದ ವರ್ಗದವರು ಅಧಿಕಾರಕ್ಕೆ ಬರಲು ನಮ್ಮ ದೇಶದ ಸಂವಿಧಾನವೇ ಕಾರಣ ಎಂದರು. ಮುಖ್ಯಗುರು ಬಡಿಗೇರ್ ಜಿಲಾನ್‌ಸಾಬ್ ಇವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ದೇಶದ ಪ್ರಜೆಗಳು ಬೇರೆ, ಬೇರೆ ಜಾತಿ, ಧರ್ಮದಲ್ಲಿ ಹುಟ್ಟಿದ್ದರೂ ನಾವೆಲ್ಲರೂ ಭಾರತೀಯರಂತೆ, ಸಹೋದರರಂತೆ ಬದುಕೋಣ ಎಂದರು. ನಂತರ ಮಕ್ಕಳ ವಿವಿಧ ಛದ್ಮಾವೇಷದಲ್ಲಿ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಕೆ.ಶ್ವೇತಾ, ಎಂ.ಲಕ್ಷ್ಮಿ, ಎಂ.ವರ್ಷಾ, ಕೋಲ್ಕರ್ ಉಮಾ, ಸುನೀತಾ, ಮುಸ್ಕಾನ್, ಜೆ.ಅಕ್ಷತಾ, ಗೌಸಿಯಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.