ವಿದ್ಯಾರ್ಥಿಗಳ ವಿರುದ್ದ ಹಿಂಸಾಚಾರಕ್ಕೆ ಕಾಂಗ್ರೆಸ್ ಕಾರ್ಯಕಾರಣಿ ಕಳವಳ; ಸೋನಿಯಾ ಗಾಂಧಿ

ನವದೆಹಲಿ, ಜ 11:  ಪೌರತ್ವ  ತಿದ್ದುಪಡಿ ಕಾಯ್ದೆ  ತಾರತಮ್ಯ ಹಾಗೂ  ವಿಭಜನಾತ್ಮಕ  ಕಾನೂನು ಎಂದು  ಬಣ್ಣಿಸಿರುವ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ,  ಕಾಯ್ದೆಯ ವಿರುದ್ದ ಪ್ರತಿಭಟನೆ ನಡೆಸಿದ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ  ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಗೆ   ಸಂಬಂಧಿಸಿದ  ಘಟನೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು  ಅವರು  ಶನಿವಾರ   ಒತ್ತಾಯಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ  ರಾಷ್ಟ್ರೀಯ ಪೌರತ್ವ ನೋಂದಣಿ  ವಿರುದ್ದ ದೇಶಾದ್ಯಂತ ನಡೆದ ಪ್ರತಿಭಟನೆಯಿಂದ ಉದ್ಬವವಾಗಿರುವ ಪರಿಸ್ಥಿತಿ  ಹಾಗೂ  ಜೆಎನ್ ಯು ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದ   ದೌರ್ಜನ್ಯ ಕುರಿತು ಚರ್ಚೆಸಲು   ಪಕ್ಷದ  ಅತ್ಯುನ್ನತ ನೀತಿ ನಿರ್ಧಾರದ ವೇದಿಕೆಯಾಗಿರುವ  ಕಾಂಗ್ರೆಸ್ ಕಾರ್ಯಕಾರಿಣಿ  ಸಭೆ ಉದ್ದೇಶಿಸಿ ಮಾತನಾಡಿದ   ಸೋನಿಯಾ ಗಾಂಧಿ,    ಉತ್ತರ ಪ್ರದೇಶದ   ಹಲವು  ನಗರಗಳಲ್ಲಿ,   ಜಾಮಿಯಾ ಮಿಲಿಯಾ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಅಲಹಾಬಾದ್ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಗುಜರಾತ್ ವಿಶ್ವವಿದ್ಯಾಲಯ,  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ   ಪೊಲೀಸರು  ನಡೆಸಿರುವ  ವಿವೇಚನಾರಹಿತ ಬಲ ಪ್ರಯೋಗದಿಂದ  ನಾವು ತೀವ್ರ ಭಯಗೊಂಡಿದ್ದೇವೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ತೀವ್ರ  ಸಂತಾಪ  ವ್ಯಕ್ತಪಡಿಸುತ್ತೇವೆ ಎಂದರು.  

ಉತ್ತರ ಪ್ರದೇಶ  ಸರ್ಕಾರವಾಗಲೀ, ಇಲ್ಲವೇ   ದೆಹಲಿ  ಉಪ ರಾಜ್ಯಪಾಲರು  ಘಟನೆಗಳಿಗೆ ಕಾರಣರಾದ   ತಪ್ಪಿತಸ್ಥರನ್ನು  ನ್ಯಾಯದ ಕಕ್ಷೆಗೆ ಒಳಪಡಿಸಲಿದ್ದಾರೆ  ಎಂಬ  ಬಗ್ಗೆ ನಮಗೆ ನಂಬಿಕೆಯಿಲ್ಲ.   ಸಿಎಎ ವಿರುದ್ದ  ಪ್ರತಿಭಟನೆಗಳ  ಘಟನೆಗಳ   ಬಗ್ಗೆ ಸಮಗ್ರ ತನಿಖೆ ನಡೆಸಿ, ಬಾಧಿತ ಜನರಿಗೆ ನ್ಯಾಯ ಕಲ್ಪಿಸಲು  ಉನ್ನತಾಧಿಕಾರ  ಸಮಿತಿಯೊಂದನ್ನು ರಚಿಸಬೇಕು ಎಂದು  ಅವರು ಒತ್ತಾಯಿಸಿದ್ದಾರೆ.  

  ಸಮಾನತೆ,  ಸಮಾನ ರಕ್ಷಣೆಯ ಕಾನೂನುಗಳು ಹಾಗೂ ನ್ಯಾಯ ಮತ್ತು ಘನತೆಗಾಗಿ  ದೇಶದ ಜನರು ನಡೆಸುತ್ತಿರುವ ಹೋರಾಟಕ್ಕೆ ಪಕ್ಷದ ಕಾರ್ಯಕರ್ತರು ಭುಜಕ್ಕೆ ಭುಜ ನೀಡಿ  ಬೆಂಬಲಿಸಲಿದ್ದಾರೆ ಎಂದು ಸೋನಿಯಾ ಗಾಂಧಿ  ಘೋಷಿಸಿದ್ದಾರೆ.   

ಪ್ರತಿಪಕ್ಷಗಳ ತೀವ್ರ  ವಿರೋಧದ ನಡುವೆ,   ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ಸಿಎಎ ಕಾಯ್ದೆ  'ತಾರತಮ್ಯ' ಮತ್ತು 'ವಿಭಜಕ' ಕಾನೂನು ಎಂದು  ಸೋನಿಯಾ  ಗಾಂಧಿ  ಆಕ್ರೋಶ ವ್ಯಕ್ತಪಡಿಸಿದರು.  ಈ ಕಾನೂನಿನ ಕೆಟ್ಟ ಉದ್ದೇಶವನ್ನು ಪ್ರತಿಯೊಬ್ಬ ದೇಶಭಕ್ತ, ಜಾತ್ಯತೀತ, ಸಹಿಷ್ಣುತೆಯುಳ್ಳ  ನಾಗರೀಕನ   ಸ್ಪಷ್ಟವಾಗಿ  ಅರಿವಿಗೆ ಬಂದಿದೆ.    ಇದು ಭಾರತೀಯರನ್ನು  ಧಾರ್ಮಿಕ ದೃಷ್ಟಿಯಿಂದ ವಿಭಜಿಸುವುದಾಗಿದೆ.  ಸಿಎಎ  ಜಾರಿಯಿಂದ  ಉಂಟಾಗುವ ಗಂಭೀರ ಪರಿಣಾಮವನ್ನು  ಲಕ್ಷಾಂತರ ಯುವ ಜನಾಂಗ, ವಿಶೇಷವಾಗಿ ವಿದ್ಯಾರ್ಥಿಗಳು ಅರಿತುಕೊಂಡು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ  ಎಂದು ಸೋನಿಯಾ ಗಾಂಧಿ  ವಿಶ್ಲೇಷಿಸಿದರು.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಹಿರಿಯ ನಾಯಕರಾದ ಪಿ ಚಿದಂಬರಂ,  ಎ ಕೆ ಆಂಟನಿ  ಹಾಗೂ ಇತರ ಹಿರಿಯ ನಾಯಕರು  ಸಭೆಯಲ್ಲಿ  ಪಾಲ್ಗೊಂಡಿದ್ದರು.