ಲೋಕದರ್ಶನ ವರದಿ
ಕೊಪ್ಪಳ 10: ಕಳೆದ ಮೂರು ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆಗೆ ಭತ್ತದ ಬೆಳೆ ಅಪಾರ ನಷ್ಟವಾಗಿದ್ದು, ಸೂಕ್ತ ಪರಿಹಾರ ಹಾಗೂ ಭತ್ತ ಕಟಾವು ಯಂತ್ರವನ್ನು ಒದಗಿಸುವಂತೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಹಾಗೂ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರು, ಕೆ.ರಾಘವೇಂದ್ರ ಹಿಟ್ನಾಳ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕಳೆದ ಏ. 7 ರಂದು ಸಂಜೆ ಅಕಾಲಿಕ ಗಾಳಿ ಸಮೇತ ಮಳೆ ಸುರಿದ ಹಿನ್ನೆಲೆ ಅಪಾರ ಪ್ರಮಾಣ ಬೆಳೆ ನಷ್ಟವಾಗಿದೆ. ಸಾವಿರ ಎಕರೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ಬಾರಿ ಬೆಳೆ ನಷ್ಟವಾದಾಗ ನಾನು ವಿಶೇಷ ಪ್ಯಾಕೇಜ್ ಅಡಿ ಹೆಕ್ಟರ್ ಗೆ 75 ಸಾವಿರ ನೀಡಲಾಗಿತ್ತು. ಕಳೆದ ಬಾರಿಗಿಂತ ಈ ಸಲ ಹೆಚ್ಚು ನಷ್ಟವಾಗಿದೆ. ಹೇಕ್ಟರ್ ಗೆ 40 ಸಾವಿರ ನೀಡಬೇಕು ಹಾಗೂ ಕಟಾವು ಯಂತ್ರ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು.
ಈ ವೇಳೆ ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ. ರಾಜಶೇಖರ್ ಹಿಟ್ನಾಳ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಎಂ.ಕಾಟನ್ ಪಾಷ, ಜಿಲ್ಲಾ ಮಾಧ್ಯಮ ವಕ್ತಾರ ರವಿ ಕುರಗೋಡ, ಶ್ರೀನಿವಾಸರೆಡ್ಡಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.