ಎಐಎಮ್‌ಎಸ್‌ಎಸ್ ನಿಂದ ಸಾವಿತ್ರಿ ಬಾಯಿ ಫುಲೆ ರವರ 194ನೇ ಜನ್ಮ ದಿನಾಚರಣೆ ಪಾಕ್ಷಿಕದ ಸಮಾರೋಪ ಕಾರ್ಯಕ್ರಮ
ಬಳ್ಳಾರಿ 18:ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡುತ್ತಾ "ಶಿಕ್ಷಣದಿಂದ ಮಾತ್ರ ಅರಿವು ಸಾಧ್ಯ, ಅರಿವಿನಿಂದ ಮಾತ್ರ ಕ್ರಿಯೆ ಸಾಧ್ಯ, ಕ್ರಿಯೆಯಿಂದ ಮಾತ್ರ ಬದಲಾವಣೆ ಸಾಧ್ಯ" ಎಂದು ಸಾರಿ ಹೆಣ್ಣುಮಕ್ಕಳ ಅದರಲ್ಲೂ ಕೆಳ ಜಾತಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕೆಂದು ಹೋರಾಟ ನಡೆಸುತ್ತಾ ಕೇವಲ 4 ವರ್ಷಗಳಲ್ಲೇ 18 ಹೆಣ್ಣುಮಕ್ಕಳ ಶಾಲೆಗಳನ್ನು ತೆರೆದವರು ಸಾವಿತ್ರಿಬಾಯಿ ಫುಲೆ . ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಕೆಳ ಜಾತಿಯವರ ಮೇಲೆ ನಡೆಯುತ್ತಿದ್ದ ಹಲವು ರೀತಿಯ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಛಲ ಬಿಡದ ಹೋರಾಟ ಕಟ್ಟಿದರು. ಅಸ್ಪೃಶ್ಯರು ನೀರಿಗಾಗಿ ಬವಣೆ ಪಡುತ್ತಿದ್ದುದನ್ನು ನೋಡಿ 1868ರಲ್ಲಿ ಅವರಿಗಾಗಿ ತಮ್ಮ ಬಾವಿಯನ್ನು ಬಿಟ್ಟುಕೊಟ್ಟರು. ಇದರಿಂದ ಅವರು ಹೆದರಿದಾಗ ಧೈರ್ಯ ತುಂಬಿ ನೀರನ್ನು ಬಳಸುವಂತೆ ಮಾಡಿದರು."ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ" ಎಂದು ಸಾರಿದ ಫುಲೆ ದಂಪತಿಗಳು ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿದರು. ವಿಧವೆಯರ ಶೋಚನೀಯ ಪರಿಸ್ಥಿತಿಯನ್ನು ಕಂಡು 1884ರ ಹೊತ್ತಿಗೆ ವಿಧವೆಯರಿಗಾಗಿಯೇ 34 ಆಶ್ರಮಗಳನ್ನು ತೆರೆದರು. ಸಾಕು ಮಗನಿಗೆ ವಿಧವೆಯೊಡನೆ ವಿವಾಹ ಮಾಡಿ ಸಮಾಜಕ್ಕೆ ಮಾದರಿಯಾದರು. ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದ ಫುಲೆ ದಂಪತಿಗಳು, ಈ ಸಮಾಜದ ಮೂಲಕ ಅಂತರ ಜಾತಿ ವಿವಾಹ, ಸರಳ ವಿವಾಹ, ಮದುವೆಗಳಲ್ಲಿ ಬ್ರಾಹ್ಮಣ ಪುರೋಹಿತರಿಲ್ಲದ ವಿವಾಹ ಹೀಗೆ ಅನೇಕ ಚಟುವಟಿಕೆಗಳನ್ನು ಕೈಗೊಂಡರು. 1890 ರಲ್ಲಿ ಜ್ಯೋತಿಬಾ ಅವರು ಕೊನೆಯುಸಿರೆಳೆದಾಗ ಹೆಂಡತಿಯಾಗಿ ತಾವೇ ಸ್ವತ: ತಮ್ಮ ಗಂಡನ ಚಿತೆಗೆ ಬೆಂಕಿ ಇಟ್ಟು ಸಾವಿನ ಶೋಕದಲ್ಲೂ ಪರೀಕ್ಷೆ ಎದುರಿಸಿದರು. ಸಾವಿತ್ರಿಬಾಯಿ ಫುಲೆಯವರು ತಮ್ಮ ನಂಬಿಕೆಗಳಿಗೆ ಬದ್ಧರಾಗಿ ಬದುಕಿದರು ಎಂಬುದಕ್ಕೆ ಈ ಘಟನೆಯೇ ಅದ್ಭುತ ಸಾಕ್ಷಿಯಾಗಿದೆ. ಸಾವಿನ ಸಂದರ್ಭದಲ್ಲೂ ಸಾಮಾಜಿಕ ಕಟ್ಟಳೆಗಳನ್ನು ಮುರಿದ ಗಟ್ಟಿ ಮನಸ್ಸಿನ ಮಹಿಳೆ ಸಾವಿತ್ರಿಬಾಯಿ ಫುಲೆ. ಹೀಗೆ ನುಡಿದಂತೆ ನಡೆದ ಸಾವಿತ್ರಿಬಾಯಿ ಫುಲೆ ಅವರ ಜೀವನ ಹೋರಾಟ, ವಿಚಾರ ಇಂದಿನ ಪೀಳಿಗೆಗೆ ದಾರೀದೀಪವಾಗಬೇಕು. ಅವರ ಜೀವನದಿಂದ ಸ್ಫೂರ್ತಿ ಪಡೆದು ಅವರು ಆರಂಭಿಸಿದ, ಇಂದಿಗೂ ಅಪೂರ್ಣವಾಗಿ ಉಳಿದಿರುವ ಕೆಲಸವನ್ನು ಮುಂದುವರೆಸಲು ಅವರ ವಾರಸುದಾರರಾಗಿ ಕಾರ್ಯ ಪ್ರವೃತ್ತರಾಗಬೇಕು. ಅದುವೇ ನಾವು ಅವರಿಗೆ ನೀಡುವ ನಿಜವಾದ ಗೌರವ" ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಎಐಎಮ್‌ಎಸ್‌ಎಸ್ ನ ಜಿಲ್ಲಾ ಜಂಟಿ ಕಾರ್ಯದರ್ಶಿ ವಿದ್ಯಾವತಿ ಮಾತನಾಡುತ್ತಾ "ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮದಿನದ ಪ್ರಯುಕ್ತ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ, ಭದ್ರತೆ ಖಾತ್ರಿಪಡಿಸಲು ಆಗ್ರಹಿಸಿ ಪಾಕ್ಷಿಕ ಕಾರ್ಯಕ್ರಮಗಳನ್ನು ಹಳ್ಳಿ, ಬಡಾವಣೆ, ಕಾಲೇಜು ಮಟ್ಟದಲ್ಲಿ ಎಲ್ಲಾ ಸ್ತರದ ಮಹಿಳೆಯರ ನಡುವೆ ಜನವರಿ 3 ರಿಂದ 18ರ ವರೆಗೆ ಹಮ್ಮಿಕೊಳ್ಳಲಾಯಿತು. ಅವರ ಜೀವನ ಹೋರಾಟದ ಸ್ಫೂರ್ತಿಯನ್ನು ಮಹಿಳೆಯರಿಗೆ ತಿಳಿಸುತ್ತಾ ಇಂದಿನ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟಲು ಒಗ್ಗಟ್ಟಾಗಿ ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದು ತಿಳಿಸಲಾಯಿತು. ಒಟ್ಟಾರೆಯಾಗಿ ಸಾವಿತ್ರಿಬಾಯಿ ಫುಲೆಯವರು ಕಂಡ ಸಮಾನತೆ ಇರುವ ಸಮಾಜವನ್ನು ಕಟ್ಟಲು ನಾವೆಲ್ಲರೂ ಶ್ರಮಿಸೋಣ" ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪದ್ಮ, ಗಿರಿಜಾ, ಸೌಮ್ಯ, ಅಭಿಲಾಷ ಉಪಸ್ಥಿತರಿದ್ದರು.