ಕಂಪ್ಲಿ ಪುರಸಭೆ ಕೈ ವಶಕ್ಕೆ : ನೂತನ ಅಧ್ಯಕ್ಷರಾಗಿ ಭಟ್ಟ ಪ್ರಸಾದ್, ಉಪಾಧ್ಯಕ್ಷರಾಗಿ ಸುಶೀಲಮ್ಮ ಆಯ್ಕೆ
ಕಂಪ್ಲಿ 23 : ಕುತೂಹಲ ಕೆರಳಿಸಿದ್ದ ಕಂಪ್ಲಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಗದ್ದುಗೆ ಕೈ ವಶವಾಗಿದ್ದು, ಬಹುಮತದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಇಲ್ಲಿನ ಪುರಸಭೆಯಲ್ಲಿ ಎರಡನೇ ಅವಧಿಗೆ ನಿಗದಿಯಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು.ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಭಟ್ಟ ಪ್ರಸಾದ್ ಹಾಗೂ ಬಿಜೆಪಿಯಿಂದ ಟಿ.ವಿ.ಸುದರ್ಶನರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಮತ್ತು ಸಾಮಾನ್ಯ ಮಹಿಳೆ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸುಶೀಲಮ್ಮ ಹಾಗೂ ಬಿಜೆಪಿಯಿಂದ ಹೇಮಾವತಿ ಪೂರ್ಣಚಂದ್ರ ಇವರು ನಾಮಪತ್ರ ಸಲ್ಲಿಸಿದರು.ಬಿಜೆಪಿ 13 ಮತ್ತು ಕಾಂಗ್ರೆಸ್ 12 ಸೇರಿದಂತೆ ಒಟ್ಟು 23 ಜನ ಸದಸ್ಯರಿದ್ದರು. ಆದರೆ, 23 ಸದಸ್ಯರ ಪೈಕಿ 3 ಜನ ಬಿಜೆಪಿ ಸದಸ್ಯರು ಗೈರಾಗಿದ್ದರು. ಇಲ್ಲಿನ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಸಂಸದ ಈ.ತುಕಾರಂ, ಶಾಸಕ ಜೆ.ಎನ್.ಗಣೇಶ ಹಾಗೂ 10 ಜನ ಕಾಂಗ್ರೆಸ್ ಸದಸ್ಯರು ಸೇರಿದಂತೆ ಒಟ್ಟು 12 ಜನರ ಬೆಂಬಲದೊಂದಿಗೆ ನೂತನ ಅಧ್ಯಕ್ಷರಾಗಿ ಭಟ್ಟ ಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ಸುಶೀಲಮ್ಮ ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನದ ಪ್ರತಿ ಸ್ಪರ್ಧಿ ಟಿ.ವಿ.ಸುದರ್ಶನರೆಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನದ ಸ್ಪರ್ಧಿ ಹೇಮಾವತಿ ಇವರು ತಲಾ 10 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು. ಒಟ್ಟಾರೆಯಾಗಿ ಪುರಸಭೆಯು ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿ ಸೋಲು ಕಂಡಿತು. ಸಂಸದ ಈ.ತುಕಾರಾಂ ಮಾತನಾಡಿ, ಈ ಬಾರಿ ಕಾಂಗ್ರೆಸ್ ಗೆಲುವಾಗಿದೆ. ಕಂಪ್ಲಿ ಕ್ಷೇತ್ರದ ಜನರು ಅಭಿಮಾನ, ವಿಶ್ವಾಸ ಇಟ್ಟಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಜನರ ಆಶೋತ್ತರಗಳನ್ನು ಈಡೇರಿಸಬೇಕು. ಪಟ್ಟಣದ ಅಭಿವೃದ್ಧಿ ಸದಾ ಬೆಂಬಲ ನೀಡಲಾಗುವುದು ಎಂದರು. ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಕಂಪ್ಲಿ ಜನರ ನೀರೀಕ್ಷೆಯಂತೆ ಪುರಸಭೆಯು ಕೈ ವಶವಾಗಿದೆ. ಜನರ ನೀರೀಕ್ಷೆಯಂತೆ ಅಭಿವೃದ್ಧಿ ಮಾಡಬೇಕು. ಚುನಾವಣೆಯ ನಂತರದ ದಿನದಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಿನೊಂದಿಗೆ ಕಂಪ್ಲಿ ಅಭಿವೃದ್ಧಿ ಮಾಡಬೇಕು ಎಂದರು. ಚುನಾವಣೆ ವೇಳೆ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಶಿವರಾಜ ಶಿವಪುರ, ಶಿರಸ್ತೇದಾರ ಪಂಪಾಪತಿ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಸದಸ್ಯರಾದ ಡಾ.ವಿಲ್.ಬಾಬು, ನಾಗಮ್ಮ, ಚಾಂದ್‌ಬಾಷಾ, ಜಿ.ಸುಮಾ, ತಿಮ್ಮಕ್ಕ, ಮೌಲಾ, ಗುಡದಮ್ಮ, ಎಂ.ಹೊನ್ನೂರವಲಿ, ಶಾಂತಲಾ ವಿದ್ಯಾಧರ, ವೀರಾಂಜನೇಯಲು, ಎಸ್.ಎಂ.ನಾಗರಾಜ, ಸಿ.ಆರ್.ಹನುಮಂತ, ಎಂ.ಉಸ್ಮಾನ್, ಎನ್.ರಾಮಾಂಜಿನೇಯಲು, ಆರ್.ಆಂಜನೇಯ, ರಮೇಶ ಹೂಗಾರ ಇದ್ದರು. ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರೆ್ಣ ಮಾಡಿ ಅಭಿನಂದಿಸಿದರು. ಪಿಐ ಕೆಬಿ ವಾಸುಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರಿ್ಡಸಲಾಗಿತ್ತು.ಸಂಭ್ರಮಾಚರಣೆ : ಕಾಂಗ್ರೆಸ್ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಸಲಾಯಿತು. ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಕಂಪ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಜ.001: ಪುರಸಭೆಗೆ ಆಯ್ಕೆಗೊಂಡ ನೂತನ ಅಧ್ಯಕ್ಷ ಭಟ್ಟ ಪ್ರಸಾದ್, ಉಪಾಧ್ಯಕ್ಷೆ ಸುಶೀಲಮ್ಮ ಇವರು ಸಂಸದ ತುಕಾರಾಂ, ಶಾಸಕ ಗಣೇಶ ಅವರೊಂದಿಗೆ ಗೆಲುವಿನ ನಗೆ ಬೀರಿದರು.