ಪುನರ್ವಸತಿ ಕೇಂದ್ರಗಳ ಅಭಿವೃದ್ದಿಗೆ ಬದ್ಧ - ಶಾಸಕ ಜೆ ಟಿ ಪಾಟೀಲ
ಬೀಳಗಿ 04: ಮತಕ್ಷೇತ್ರದಲ್ಲಿ ಬರುವ ಸಂಪೂರ್ಣ ಪುನರ್ವಸತಿ ಕೇಂದ್ರಗಳ ಅಭಿವೃದ್ದಿ ಜತೆಗೆ ಅಲ್ಲಿನ ಮೂಲಸೌಕರ್ಯಗಳು ಸಿಗುವಂತೆ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದ್ದು ಬರುವ ದಿನಗಳಲ್ಲಿ ಎಲ್ಲ ಪುನರ್ವಸತಿ ಕೇಂದ್ರಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕ ಜೆ ಟಿ ಪಾಟೀಲ ತಿಳಿಸಿದರು.
ತಾಲೂಕಿನ ಸೊನ್ನ, ಡವಳೇಶ್ವರ, ಗರಡದಿನ್ನಿ, ಕೊರ್ತಿ, ಹೆಗ್ಗೂರ, ಗೂಡಿಹಾಳ, ಬೀಳಗಿ ಕ್ರಾಸ -4 ಪುನರ್ವಸತಿ ಕೇಂದ್ರಗಳಲ್ಲಿ ಕೃಷ್ಣಾ ಮೆಲ್ದಂಡೆ ಯೋಜನೆ ಪುನರ್ವಸತಿ ಉಪವಿಭಾಗ 5ರ ಕೆಬಿಜೆಎನ್ಎಲ್ ವಿಶೇಷ ಅನುದಾನದಡಿಯಲ್ಲಿ ಅಂತರಿಕ ರಸ್ತೆ ನಿರ್ಮಾಣ ಕಾಮಗಾರಿ, ಸಾರ್ವಜನಿಕ ಸ್ಥಳಗಳ ಅಭಿವೃದ್ದಿ, ಸ್ಮಶಾನಗಳಲ್ಲಿ ತಂಗುದಾನ, ಚಿತಾಗಾರ ಕಟ್ಟಡ ಕಾಮಗಾರಿ, ನೂತನ ಶಾಲಾ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪುನರ್ವಸತಿ ಕೇಂದ್ರಗಳ ಅಭಿವೃದ್ದಿಗೆ ಬೇಕಿರುವ ಅನುದಾನದ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸಮಗ್ರ ಯೋಜನೆ ಸಿದ್ದ ಮಾಡಲಾಗಿದ್ದು ಯಾವ ಪುನರ್ವಸತಿ ಕೇಂದ್ರಗಳಲ್ಲಿ ಶೇ 50ಕ್ಕೂ ಹೆಚ್ಚು ಜನಸಂಖ್ಯೆ ವಾಸವಾಗಿದ್ದಾರೋ ಅಂತಹ ಪುಕೆಂಗಳ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗಿದ್ದು ಬರುವ ಬಜೆಟ್ನಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಆಗಬೇಕಿರುವ ಅಭಿವೃದ್ದಿ ಕೆಲಸ ಜತೆಗೆ ಹೊಸ ನೀರಾವರಿ ಯೋಜನೆಗಳನ್ನು ಸಿದ್ದ ಮಾಡಿ ಅವುಗಳನ್ನು ಜಾರಿಗೆ ತರಲಾಗುವುದು, ಬಿಜೆಪಿ ಅವಧಿಯಲ್ಲಿ ಕಾಮಗಾರಿಗಳ ಬಾಕಿ ಬಿಲ್ ವಿತರಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡುವುದಕ್ಕಾಗಿಯೇ ಸ್ವಲ್ಪ ಮಟ್ಟಿನ ಅಭಿವೃದ್ದಿ ಕೆಲಸಗಳು ಅಡ್ಡಿಯಾಗಿದ್ದು ಬರುವ ಬಜೆಟ್ ನಂತರ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದು ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಿ ಅಭಿವೃದ್ದಿಯತ್ತ ದಾಪುಗಾಲು ಹಾಕಲಾಗುವುದು ಎಂದರು.
ಕಾಮಗಾರಿಗಳ ಕುರಿತಾಗಿ ನಿಗಾವಹಿಸಿ: ಸರಕಾರದಿಂದ ಮಂಜೂರಾಗಿರುವ ಕಾಮಗಾರಿಗಳನ್ನು ಅಧಿಕಾರಿಗಳು ಕಟ್ಟು ನಿಟ್ಟಾಗಿ ನಿಗಧಿತ ಅವಧಿಯಲ್ಲಿ ಕಾಮಗಾರಿಯಾಗುವಂತೆ ನಿಗಾವಹಿಸಿ ಕಾಮಗಾರಿ ಕಳಪೆಯಾಗದಂತೆ ನಿಗಾವಹಿಸಬೇಕು ಜತೆಗೆ ಗ್ರಾಮಸ್ಥರು ಕಾಮಗಾರಿಗಳ ಕುರಿತಾಗಿ ನಿಗಾವಹಿಸಿ ಅಧಿಕಾರಿಗಳ ಗಮನಕ್ಕೆ ತರಬೇಕು ಅವರು ಮಾತು ಕೇಳದೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದು ಗುಣಮಟ್ಟದ ಕಾಮಗಾರಿಗಳಿಗಾಗಿ ಎಲ್ಲರು ನಿಗಾವಹಿಸಿ ಎಂದರು.
ಈ ಸಂದರ್ಭದಲ್ಲಿ ಕೊರ್ತಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾದರ, ಬ್ಲಾಕ ಕಾಂಗ್ರೆಸ ಅಧ್ಯಕ್ಷ ಹಣಮಂತ ಕಾಖಂಡಕಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಮಾಜಿ ಜಿಪಂ ಸದಸ್ಯ ಯಮನಪ್ಪ ರೊಳ್ಳಿ, ಜಿ ಆರ್ ಪಾಟೀಲ, ಸಿದ್ದು ಗಿರಗಾಂವಿ, ಪ.ಪಂ ಸದಸ್ಯ ರಾಜು ಬೋರ್ಜಿ, ಸಿದ್ದು ಸಾರಾವರಿ, ಉದಯ ರಜಪೂತ, ಬಸವರಾಜ ಹಳ್ಳದಮನಿ, ಬಿ ಆರ್ ಸೊನ್ನದ, ಹಣಮಂತಗೌಡ ಪಾಟೀಲ, ಕಿರಣ ಬಾಳಾಗೋಳ, ಕುಮಾರ ಹಿರೇಮಠ, ಬಿಇಓ ಆರ್ ಎಸ್ ಆದಾಪೂರ, ಗುತ್ತಿಗೆದಾದರು, ಕೆಬಿಜೆಎನ್ಎಲ್ ಇಲಾಖೆ ಅಧಿಕಾರಿಗಳು ಇದ್ದರು.