ಅನಧಿಕೃತ ಗರ್ಭಕೋಶ ಸಂತ್ರಸ್ತ ಮಹಿಳೆಯರಿಂದ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮಿ ಭೇಟಿ: ಪರಿಹಾರ ದೊರಕಿಸಲು ಚರ್ಚಿಸುವ ಭರವಸೆ
ರಾಣೆಬೆನ್ನೂರು 07: ತಾಲೂಕಿನಲ್ಲಿ ಕಳೆದ 14ವರ್ಷಗಳ ಹಿಂದೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಂದಿನ ವೈದ್ಯಾಧಿಕಾರಿ ಡಾ.ಪಿ. ಶಾಂತ್ ಅವರಿಂದ ಅಂದು ನಡೆದ ಮಹಿಳೆಯರ ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ,ಬೆಂಗಳೂರಿಗೆ ನಿಯೋಗ ತೆರಳಿದ ನೂರಾರು ಸಂತ್ರಸ್ತ ಮಹಿಳೆಯರು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌದರಿ ಅವರನ್ನು ಭೇಟಿ ನೀಡಿ, ಸಂತ್ರಸ್ತ ಮಹಿಳೆಯರಿಗೆ ಶಾಶ್ವತ ಪರಿಹಾರ ದೊರಕಿಸುವಂತೆ, ತಮ್ಮ ಮನವಿ ಸಲ್ಲಿಸಿದರು. ವೈದ್ಯಾಧಿಕಾರಿ ತನ್ನ ಧನದಾಹದಿಂದ ಮಹತ್ವದ ಅಂಗವನ್ನು ಕಳೆದುಕೊಂಡು, ಬದುಕಲು ಆಗದೆ ಸಾಯಲು ಆಗದೆ ಅತಂತ್ರ ಸ್ಥಿತಿಯಲ್ಲಿ ದಿನದೊಡು ವಂತಾಗಿದೆ. ಸರಕಾರಗಳು ಬಂದವು ಹೋದವು ಆದರೆ ಪರಿಹಾರ ಮಾತ್ರ ಶೂನ್ಯವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಂದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದರೊ, ಪರಿಹಾರಕ್ಕಾಗಿ ಅನೇಕ ಬಾರಿ ಅಲೆದು ಅಲೆದು ಸಾಕಾಗಿ ಹೋಗಿದೆ.ಬಿಜೆಪಿ ಆಡಳಿತದಲ್ಲಿಯೂ, ಪರಿಹಾರ ನೀಡುವ, ಉದ್ಯೋಗ ಕಲ್ಪಿಸುವ ಭರವಸೆ ಬಿಟ್ಟರೆ ಒಮ್ಮಾಯಿಯವರು ಏನು ಮಾಡಲಿಲ್ಲ. ನಂಬುವುದಾದರೂ ಯಾರಿಗೆ ಎನ್ನುವ ಚಿಂತೆ ಸಂತ್ರಸ್ತರನ್ನು ಕಾಡುತ್ತಿದೆ ಎನ್ನುತ್ತಾರೆ ಹೋರಾಟದ ಮುಂಚೂಣಿ ನಾಯಕಿ, ತಾಲೂಕಾ ಸಂತ್ರಸ್ತ ಮಹಿಳಾ ಹೋರಾಟ ಸಮಿತಿಯ ಅಧ್ಯಕ್ಷ ಲಲಿತವ್ವ ಲಮಾಣಿ. 2010 ರಿಂದ 2016 ವರೆಗೂ ಒಟ್ಟು 1522 ಹೆಚ್ಚು ಮಹಿಳೆಯರಿಗೆ ಡಾ. ಶಾಂತ್ ಪಿ. ವೈದ್ಯರು ಪ್ರತಿ ರೋಗಿಯಿಂದ 25 ರಿಂದ 30 ಸಾವಿರ ರೂಪಾಯಿ ಹಣ ಪಡೆದು ಅನಧಿಕೃತವಾಗಿ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಓದು ಬರಹ ಗೊತ್ತಿಲ್ಲದ ನಮಗೆ ಮೋಸಕ್ಕೆ ಬಲಿಯಾಗಿದ್ದೇವೆ. ಶಕ್ತಿ ಹೀನರಾಗಿರುವ ನಾವುಗಳು ಇಂದು ನಿತ್ಯವೂ ಮಾನಸಿಕವಾಗಿ, ದೈಹಿಕವಾಗಿ,ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಜೀವನ ಸಾಗಿಸುವಂತವರಾಗಿದ್ದೇವೆ. ಎಂದು ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಅವರಲ್ಲಿ ತಮ್ಮ ಅಳಲು ತೋಡಿಕೊಂಡರು.
ಶಕ್ತಿ ಹೀನತೆಯಿಂದ ಬಳಸುತ್ತಿರುವ ನಮಗೆ ಸಂಜೆಯಾದರೆ ಕಣ್ಣು ಕಾಣದಿರುವುದು, ವಿಪರೀತ ಸೊಂಟ ನೋವು, ಮಂಡಿ ನೋವು ಮುಂತಾದ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ನಮಗಾದ ಅನ್ಯಾಯಕ್ಕೆ ನ್ಯಾಯಕ್ಕಾಗಿ ಸತತ ಒಂಬತ್ತು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರು ಸರಕಾರ ಜಾಣ ಕುರುಡುತನ ನಾಟಕವಾಡುತ್ತಿದೆ. 26, 4, 2018 ರಂದು ಶಿಗ್ಗಾವಿ ಚಲೋ ಚಳುವಳಿ ಮುಖಾಂತರ ಪಾದಯಾತ್ರೆ ಮಾಡಿದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿ ಯವರು ಪಾದಯಾತ್ರೆ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಮಾಡಿದರು.ನನ್ನ ಜಿಲ್ಲೆಯ ಜನತೆಗೆ ಇದರಿಂದ ಅನ್ಯಾಯವಾಗಿದೆ ನನ್ನ ಆಡಳಿತ ಅವಧಿಯಲ್ಲಿ ನಿಮಗೆಲ್ಲರಿಗೂ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದ್ದರಿಂದ ಪಾದಯಾತ್ರೆ ಹಿಂಪಡೆಯಲಾಗಿತ್ತು ಮತ್ತು 10.05.2022ರಂದು ಶಿಗ್ಗಾವಿಯ ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಸಂತ್ರಸ್ತರ ಮಹಿಳೆಯರ ತಲೆಯ ಮೇಲೆ ಕೈಯಿಟ್ಟು ನಿಮಗೆ ಪರಿಹಾರ ಕೊಟ್ಟೇ ಕೊಡುತ್ತೇನೆ ಎಂದು ಪ್ರಮಾಣ ಮಾಡಿದ್ದರು ತದನಂತರ ಸರ್ಕಾರ ಬದಲಾಗಿ, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿತು ಅವರಿಗೂ ಸಹ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ.
18.2.2024ರಂದು ಹಾವೇರಿ ಜಿಲ್ಲೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮನವಿ ಸ್ವೀಕರಿಸಿ ನಾನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಕಾನೂನು ತಜ್ಞರ ಸಲಹೆ ಪಡೆದು ನಿಮಗೆ ಪರಿಹಾರ ನೀಡುತ್ತೇನೆ ಎಂದು ಸಂತ್ರಸ್ತ ಮಹಿಳೆಯರ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದ್ದರು ಇಂದಿಗೂ ನಮಗೆ ಕೊಟ್ಟ ಭರವಸೆಗಳು ಇಂದಲ್ಲ ನಾಳೆ ಈಡೇರಬಹುದೆಂಬ ಆಶಾ ಭಾವನೆಯಿಂದ, ಸಹನೆಯಿಂದ ಕಾದು ಕುಳಿತಿದ್ದೇವೆ. ಕೂಲಿ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವೆ ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ ಸರ್ಕಾರ ನೀಡುವ ಪರಿಹಾರದಿಂದ ನಮ್ಮ ಜೀವನೋಪಾಯಕ್ಕಾಗಿ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ ಮುಂತಾದವುಗಳಿಂದ ಉಳಿದ ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎನ್ನುವ ಆಶಾಭಾವನೆಯಲ್ಲಿ ನಾವುಗಳಿದ್ದೇವೆ. ಕೂಡಲೇ ಈ ಕುರಿತು ನ್ಯಾಯ ಒದಗಿಸಿ ಕೊಡಬೇಕೆಂದು ಕಣ್ಣೀರಿಟ್ಟ ಸಂತ್ರಸ್ತ ಮಹಿಳೆಯರು ಮನವಿ ಮಾಡಿದರು.
ಮನವಿ ಸ್ವೀಕರಿಸಿ, ಮಾತನಾಡಿದ ಅಧ್ಯಕ್ಷ ನಾಗಲಕ್ಷ್ಮಿ ಚೌದರಿ ಅವರು, ಅಂದಿನ ವೈದ್ಯರು ಇಷ್ಟೊಂದು ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡುವ ಉದ್ದೇಶವಾದರೂ ಏನಿತ್ತು?. ಯಾವ ಕಾರಣಕ್ಕಾಗಿ ಇಷ್ಟು ಮಹಿಳೆಯರಿಗೆ ಇಂತಹ ಆಪರೇಷನ್ ಮಾಡಿದರು? ಘಟನೆ ಮಹಿಳಾ ಸಮಾಜವೇ ತಲೆತಗಿಸುವಂತಹ ಪ್ರಕರಣ ಇದಾಗಿರುವಾಗ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಯಾಕೆ ಇದು ಕಲ್ಪನಿಗೂ ಮೀರಿದ ಪ್ರಕರಣ ಎಂದು ಮಹಿಳೆಯರನ್ನ ಸಂತೈಸಿ, ಧೃತಿಗಡಬೇಡಿ ನಿಮ್ಮ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಸಿಕ್ಕೇ ಸಿಗುತ್ತದೆ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನಾನು ಕಲೆ ಹಾಕಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿಮಗಾದ ಅನ್ಯಾಯಕ್ಕೆ ಪರಿಹಾರ ರೂಪದಲ್ಲಿ ನ್ಯಾಯ ಕೊಡಿಸುತ್ತೇನೆ ಎಂದು ಸಂತ್ರಸ್ತ ಮಹಿಳೆಯರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದರು, ಸರ್ಕಾರ ಮೂಠುತನ ಮುಂದುವರಿಸಿದರೆ ಮಾರ್ಚ್ ಬಜೆಟ್ ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ನೊಂದ ಮಹಿಳೆಯರು ಎಚ್ಚರಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಲಲಿತವ್ವ ಲಮಾಣಿ, ಮಂಜವ್ವ ಚೌಡಕ್ಕಳವರ,ಗಂಗವ್ವ ಲಮಾಣಿ, ಪಾರವ್ವ ಲಮಾಣಿ, ಗಿರಿಜವ್ವ ಶಿಡೇನೂರ, ಪಕ್ಕೀರವ್ವ ಕೆರಿಮಲ್ಲಾಪುರ, ಪಾರವ್ವ ಆನ್ವೇರಿ,ಶಂಕ್ರಮ್ಮ ಚೌಡ ದಾನಪುರ ಕೆ ಡಿ, ನಾಯ್ಕ್, ಮೊದಲಾದವರಿದ್ದರು.