ರಾಷ್ಟ್ರವನ್ನು ಮುನ್ನಡೆಸಲು ಸಮರ್ಥ ನಾಯಕರನ್ನು ಆಯ್ಕೆ ಮಾಡಿ : ಡಾ. ಅಜಿತ ಪ್ರಸಾದ
ಧಾರವಾಡ 25:ರಾಷ್ಟ್ರೀಯ ಮತದಾರರ ದಿನ ಇದು ಜನೆವರಿ 25 1950 ರಂದು ರಚನೆಯಾದ ಚುನಾವಣಾ ಆಯೋಗದ ದಿನದಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶಿಸಿದೆ. 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಚುನಾವಣಾ ಆಯೋಗವು ವಿಶೇಷವಾಗಿ ಯುವ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಿ ದೇಶದ ಅಭಿವೃದ್ಧಿಗಾಗಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಯುವ ಪೀಳಿಗೆಯು ಸಕ್ರಿಯವಾಗಿ ಮತದಾನದ ದಿನದಂದು ಮತ ಚಲಾಯಿಸುವುದು ಅವರ ಕರ್ತವ್ಯವಾಗಿದೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಮಾನವ ಹಕ್ಕುಗಳ ಸಂಘ ಮತ್ತು ಎನ್.ಎಸ್.ಎಸ್. ಘಟಕದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತವು ಬುಲೆಟಿಗಿಂತ ಬಲಯುತವಾದದ್ದು. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನಕ್ಕೆ ಅರ್ಹರು. ಚುನಾವಣೆಯಲ್ಲಿ ಯಾರನ್ನಾದರೂ ಆಯ್ಕೆ ಮಾಡಿ ಆದರೆ ಉತ್ತಮರನ್ನು ಆಯ್ಕೆ ಮಾಡಿ. ಆಮಿಷಗಳಿಗೆ ಒಳಗಾಗಿ ಎಂದಿಗೂ ಮತ ಚಲಾಯಿಸಬೇಡಿ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. ಆ ಮೂಲಕ ರಾಷ್ಟ್ರವನ್ನು ಮುನ್ನಡೆಸಲು ದಕ್ಷ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ಲೋಕಸಭಾ ಮಾಜಿ ಸದಸ್ಯರಾದ ಶ್ರೀ ಐ. ಜಿ. ಸನದಿ ಅವರು ಮಾತನಾಡಿ ತಮ್ಮ ರಾಜಕೀಯ ಜೀವನದಲ್ಲಿ ತಮಗಾದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಪ್ರಾಮಾಣಿಕತೆ ಮತ್ತು ಸತ್ಯದಿಂದ ಹಣವಿಲ್ಲದೆ ರಾಜಕೀಯದಲ್ಲಿ ಹೆಸರು ಮಾಡಬಹುದಾಗಿದೆ ಲಾಲ್ ಬಹದ್ದೂರ್ ಶಾಸ್ತ್ರಿ, ಟಿ.ಎಸ್.ಶೇಷನ್ ಮುಂತಾದವರ ಉದಾಹರಣೆಗಳನ್ನು ನೀಡಿದರು. ರಾಜಕೀಯದಲ್ಲಿ ಪ್ರಾಮಾಣಿಕವಾಗಿ ನಡೆದು ದಕ್ಷ ರಾಜಕೀಯ ವ್ಯಕ್ತಿ ಎಂದು ಪ್ರಮಾಣಿಸಿ ಜನರ ವಿಶ್ವಾಸ ಸಂಪಾದಿಸಿಕೊಂಡಿದ್ದನ್ನು ನೆನೆದರು. ಅವರನ್ನು ನಾನು ಆದರ್ಶವಾಗಿಟ್ಟುಕೊಂಡು ರಾಜಕೀಯದಲ್ಲಿ ನಡೆದು ಬಂದೆ. ದೇಶವನ್ನು ವಿಕಸಿತಗೊಳಿಸಲು ಯುವ ಪೀಳಿಗೆಯಿಂದ ಮಾತ್ರ ಸಾಧ್ಯ ಯುವಕರು ತಮ್ಮ ವಿಚಾರಶಕ್ತಿ ಮತ್ತು ವಿಮರ್ಶೆಯಿಂದ ಯೋಗ್ಯವಾದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ದೇಶಕ್ಕೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕೆಂದರು. ಮತದಾನದ ದಿನ ಮತದಾರರು ಸುಶಿಕ್ಷಿತವಾಗಿ, ಪ್ರಾಮಾಣಿಕವಾಗಿ, ನಿರ್ಭಯದಿಂದ ಯಾವದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿದರೆ ಮತದಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಬಹುದು ಎಂದರು.
ಹುಬ್ಬಳ್ಳಿಯ ಲೋಕಸಭಾ ಮಾಜಿ ಸದಸ್ಯ ಐ. ಜಿ. ಸನದಿಯವರನ್ನು ಜನತಾ ಶಿಕ್ಷಣ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಶೇಖರ ನಡೋಣಿ ಕವನ ವಾಚನ ಮಾಡಿದರು. ಡಾ. ಸೂರಜ ಜೈನ್, ಮಹಾವೀರ ಉಪಾಧ್ಯೆ, ಪ್ರೊ. ಆರ್.ವಿ.ಚಿಟಗುಪ್ಪಿ, ಪ್ರೊ. ಬಲಭೀಮ ಹಾವನೂರ ಮತ್ತು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ಪ್ರೊ. ಮಹಾಂತ ದೇಸಾಯಿ ನಿರೂಪಿಸಿದರು. ವಿದ್ಯಾರ್ಥಿಗಳಾದ ವಿಭಾ ಕುಲಕರ್ಣಿ ಪ್ರಾರ್ಥಿಸಿದರು. ಸಿದ್ಧಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ಸೃಜನಾ ಮುರುಗೋಡ ವಂದಿಸಿದರು.