ಐಪಿಎಲ್ ನಿಂದ ಚೀನಾ ಪ್ರಾಯೋಜಕತ್ವ ತ್ಯಜಿಸಬೇಕು: ನೆಸ್‌ ವಾಡಿಯಾ

ನವದೆಹಲಿ, ಜುಲೈ 1: ದೇಶದಲ್ಲಿ ಚೀನಾದ ಸರಕು ಸಾಮಗ್ರಿಗಳನ್ನು ಬಹಿಷ್ಕರಿಸುವ ಅಲೆ ಶುರುವಾಗಿದ್ದು, ಭಾರತೀಯ ಸರಕಾರ ಕೂಡ ಸೋಮವಾರ 59 ಚೈನೀಸ್‌ ಸ್ಮಾರ್ಟ್‌ ಫೋನ್ ಅಪ್ಲಿಕೇಷನ್‌ಗಳ ವಿರುದ್ಧ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ಮಾತಿಗಿಳಿದಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸಹ ಮಾಲೀಕ ನೆಸ್‌ ವಾಡಿಯ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲೂ ಚೀನಾ ಮೂಲದ ಸಂಸ್ಥೆಯ ಪ್ರಾಯೋಜಕತ್ವವನ್ನು ಬಿಡುವಂತೆ ಕರೆ ನೀಡಿದ್ದಾರೆ.

     ಈ ವರ್ಷದ ಸಾಧ್ಯವಾಗದೇ ಇದ್ದರು 2021ರ ಆವೃತ್ತಿ ಹೊತ್ತಿಗೆ ಪ್ರಾಯೋಜಕತ್ವ ಕೈಬಿಡುವಂತೆ ನೆಸ್‌ ವಾಡಿಯಾ ಹೇಳಿದ್ದಾರೆ. ಸದ್ಯ ಚೀನಾ ಮೂಲದ ಸ್ಮಾರ್ಟ್‌ ಫೋನ್‌ ತಯಾರಿಕಾ ಸಂಸ್ಥೆಯಾದ ವಿವೋ ಐಪಿಎಲ್‌ ಟೂರ್ನಿಯ ಟೈಟಲ್‌ ಸ್ಪಾನ್ಸರ್‌ (ಶೀರ್ಶಿಕೆ ಪ್ರಾಯೋಜಕತ್ವ) ಹೊಂದಿದ್ದು, ಈ ಮೂಲಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ನೂರಾರು ಕೋಟಿ ರೂ. ಹಣ ನೀಡಿದೆ.

     ಜೂನ್‌ 15ರಂದು ಭಾರತ-ಚೀನಾ ಗಡಿ ಭಾಗ ಗಲ್ವಾನ್‌ ಕಣಿವೆಯಲ್ಲಿ ಯೂಧರ ನಡುವೆ ನಡೆದಂತಹ ಜಟಾಪಟಿಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಬಳಿಕ ದೇಶದೆಲ್ಲೆಡೆ ಚೀನಾ ಸರಕುಗಳ ಬಳಕೆ ನಿಲ್ಲಿಸಬೇಕೆಂಬ ಕ್ರಾಂತಿ ಶುರುವಾಗಿದೆ. "ದೇಶದ ಸಲುವಾಗಿ ಐಪಿಎಲ್‌ಗೆ ಪ್ರಾಯೋಜಕತ್ವ ನೀಡುತ್ತಿರುವ ಚೀನಾದ ಸಂಸ್ಥೆಗಳನ್ನು ನಿಧಾನವಾಗಿ ದೂರ ಮಾಡಬೇಕಿದೆ. ದೇಶವೇ ಮೊದಲು, ಹಣ ನಂತರ.  ಅಂದಹಾಗೆ ಇದು ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಚೈನೀಸ್‌ ಪ್ರೀಮಿಯರ್‌ ಲೀಗ್‌ ಅಲ್ಲ. ಒಪ್ಪಂದ ಕೈಬಿಟ್ಟು ಉಳಿದವರಿಗೆ ಮಾದರಿಯಾಗುವ ಅಗತ್ಯವಿದೆ," ಎಂದು ನೆಸ್‌ ವಾಡಿಯಾ ಸುದ್ದಿ ಸಂಸ್ಥೆಗೆ  ತಿಳಿಸಿದ್ದಾರೆ.

 "ಹೌದು ಈ ನಿರ್ಧಾರ ಸುಲಭದ್ದಲ್ಲ. ಆರಂಭದಲ್ಲಿ ಹೊಸ ಪ್ರಾಯೋಜಕರನ್ನು ಹುಡುಕುವುದು ಕಷ್ಟವಾಗಬಹುದು. ಆದರೆ ಭಾರತದಲ್ಲಿ ಪ್ರಾಯೋಜಕತ್ವ ಸ್ವೀಕರಿಸುವ ಹಲವು ಸಂಸ್ಥೆಗಳಿವೆ ಎಂಬ ವಿಶ್ವಾಸ ನನ್ನಲ್ಲಿದೆ. ರಾಷ್ಟ್ರದ ಪರ ಸಂಪೂರ್ಣ ಗೌರವ ಇರಬೇಕು, ಏಕೆಂದರೆ ಗಡಿ ಭಾಗದಲ್ಲಿ ನಮ್ಮ ಯೋಧರು ದೇಶಕ್ಕಾಗಿ ಪ್ರಾಣ ಬಿಡುತ್ತಿದ್ದಾರೆ," ಎಂದು ಉದ್ಯಮಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.