ಪಾಲಕರ ಪಾದಪೂಜೆ ಮಾಡಿ ಪುಣ್ಯ ಪಡೆದ ಮಕ್ಕಳು
ಮುಂಡಗೋಡ 31: ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಮನೋಜ್ಞ ಆಚರಣೆಯೊಂದು ಜರುಗಿತು. ಸರ್ಕಾರಿ ಪ್ರೌಢಶಾಲೆ ಹುನಗುಂದ ಶಾಲೆಯಲ್ಲಿ ಬರೋಬ್ಬರಿ 199 ಜನ ವಿದ್ಯಾರ್ಥಿಗಳು ಪಾಲಕರ ಪಾದಪೂಜೆ ಮಾಡಿ ಪುಣ್ಯ ಪಡೆದ ವಿದ್ಯಾರ್ಥಿಗಳು. ಕೂಲಿ ಕಾರ್ಮಿಕರು ಹಾಗೆಯೇ ಬಡವರೇ ಹೆಚ್ಚಾಗಿದ್ದ ಆ ಊರಿನ ಜನರಿಗೆ ಈ ಆಚರಣೆ ಹೊಸ ಖುಷಿಯನ್ನು ನೀಡಿತ್ತು. ಅದೇನು ಅಂತೀರಾ? ಆ ಶಾಲೆಯ ಮಕ್ಕಳು ತಮ್ಮ ತಂದೆ ತಾಯಿಯರ ಪಾದಪೂಜೆಯನ್ನು ಮಾಡಿದರು! ಹೌದು ಮೌಲ್ಯಗಳಿಗೆ ಯಾವುದೇ ಪ್ರಾಧಾನ್ಯತೆ ಇಲ್ಲದ ವಾತಾವರಣದಲ್ಲಿ ಈಗಿನ ಜನರೇಶನ್ ಸಾಗುತ್ತಿದೆ.
ದಿನೇ ದಿನೇ ಸಾಂಸಾರಿಕ ಸಂಬಂಧಗಳು ಶಿಥಿಲವಾಗುತ್ತಿವೆ. ಇದನ್ನೆಲ್ಲಾ ಮನಗಂಡ ಶಾಲೆಯ ಶಿಕ್ಷಕರು ತಮ್ಮ ಒಂದು ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಈ ಪಾದಪೂಜೆ ಆಯೋಜಿಸಿದ್ದರು. ಮಕ್ಕಳು ತಾವೂ ಕೂಡಿಟ್ಟ ಹಣದಲ್ಲಿ ಪೂಜಾ ಸಾಮಗ್ರಿ ತಂದು ತಮ್ಮ ಅಪ್ಪ-ಅಮ್ಮನನ್ನು ಕೂರಿಸಿಕೊಂಡು ಅವರ ಪಾದಗಳನ್ನು ತಟ್ಟೆಯಲ್ಲಿಟ್ಟು ಶಾಸ್ತ್ರ ಪ್ರಕಾರದಲ್ಲಿ ಪಾದಪೂಜೆ ಮಾಡಿ ಕೃತಾರ್ಥರಾದರು. ಮೇಲಾಗಿ ತಾವು ಜೀವನ ಪರ್ಯಂತ ತಪ್ಪು ದಾರಿ ಹಿಡಿಯದೇ ಒಳ್ಳೆಯ ಕೆಲಸಮಾಡುತ್ತೇವೆ, ಒಳ್ಳೆಯ ಅಂಕ ಗಳಿಸಿ ನಿಮಗೆ ಒಳ್ಳೆಯ ಹೆಸರು ತರುತ್ತೇವೆ ಎಂದು ತಂದೆ ತಾಯಿಯರ ಪಾದ ಹಿಡಿದು ಪ್ರತಿಜ್ಞೆಯನ್ನೂ ಸಹ ಮಾಡಿದರು. ಈ ಆಚರಣೆ ಮತ ಭೇದವಿಲ್ಲದೇ ನಡೆದದ್ದು ವಿಶೇಷವಾಗಿತ್ತು.