ಕಾನೂನು ಬದ್ಧವಾಗಿ ಮಗು ದತ್ತು ಪಡೆಯಬೇಕು - ಸದಸ್ಯ ಶೇಖರಗೌಡ ರಾಮತ್ನಾಳ

Child should be legally adopted - Member Shekar Gowda Ramatna

ಕಾನೂನು ಬದ್ಧವಾಗಿ ಮಗು ದತ್ತು ಪಡೆಯಬೇಕು - ಸದಸ್ಯ ಶೇಖರಗೌಡ ರಾಮತ್ನಾಳ 

ಹಾವೇರಿ 23:  ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆಯಬೇಕು. ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಮಾಡುವುದು ಅಪರಾಧವಾಗಿರುತ್ತದೆ.  ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ಹೇಳಿದರು. 

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ , ಮಕ್ಕಳ ರಕ್ಷಣಾ ನಿರ್ದೇಶನಾಲಯ,  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ  ಪೊಕ್ಸೋ ಕಾಯ್ದೆ-2012, ಪಿಸಿಪಿಎನ್‌ಡಿಟಿ ಕಾಯ್ದೆ-1994, ದತ್ತು ಅಧಿನಿಯಮ-2022 ಹಾಗೂ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.  

ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬಾಲ ಗರ್ಭಿಣಿಯರನ್ನು ನಾವು ನೋಡುತ್ತಿದ್ದೇವೆ, ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ  ಬಾಲ್ಯವಿವಾಹದಿಂದಾಗುವ ದುಷ್ಪಪರಿಣಾಮಗಳ ಬಗ್ಗೆ ತಿಳಿಸುವ ಕೆಲಸವಾಗಬೇಕು.  ಮಕ್ಕಳ ಮಾರಾಟ ತಡೆಯಬೇಕು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-1098 ಕೆರೆ ಮಾಹಿತಿ  ನೀಡಬೇಕು ಎಂದು ಸಲಹೆ ನೀಡಿದರು.  

ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಮಕ್ಕಳೊಟ್ಟಿಗೆ ಕೆಲಸ ಮಾಡುವವರಾಗಿರುವದರಿಂದ, ಮಕ್ಕಳಿಗೆ ಇರುವ ಪ್ರತ್ಯೇಕ ಕಾಯ್ದೆಗಳ ಕುರಿತು ತಿಳಿದುಕೊಳ್ಳಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್‌.ಮುತಾಲಿಕದೇಸಾಯಿ ಅವರು ಮಾತನಾಡಿ, ಮಕ್ಕಳ ಕ್ಷೇತ್ರದಲ್ಲಿ  ಕೆಲಸ ಮಾಡುವವರು ಮಕ್ಕಳ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಇತರರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.    

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್‌.ಹಾವನೂರ ಅವರು ಮಾತನಾಡಿ, ಭೂಮಿ ಮೇಲೆ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಭ್ರೂಣ ಹತ್ಯೆ ಅಪೆರಾಧವಾದೆ.   ಬದುಕಿನಲ್ಲಿ ಕಾಯ್ದೆಗಳ ಬಗ್ಗೆ ಅರಿತಾಗ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು  ಹೇಳಿದರು. 

ಜಿಲ್ಲಾ ಆಸ್ಪತ್ರೆ ಹಿರಿಯ ಸ್ತ್ರೀ ರೋಗ ತಜ್ಞರು ಡಾ.ಸಂತೋಷ ಜಿ. ಅವರು ಪಿಸಿಪಿಎಸ್‌ಡಿಟಿ ಕಾಯ್ದೆ-1994 ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕ ಎನ್‌ಎನ್ ದಿಳ್ಳೆಪ್ಪನವರ ಅವರು ಪೊಕ್ಸೋ ಕಾಯ್ದೆ-2012 ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಹೆಚ್ ಪಾಟೀಲ್ ಇತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಸ್ವಾಗತಿಸಿದರು.