ಅರಸು ಕೈಗೊಂಡ ನಿರ್ಧಾರಗಳು ಚರಿತ್ರಾರ್ಹವಾದುದು: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಜೂ.6,ರಾಜ್ಯದ  ಮುಖ್ಯಮಂತ್ರಿಯಾಗಿ, ದೂರದೃಷ್ಟಿಯುಳ್ಳ ನಾಯಕರಾಗಿ ಮಾನವೀಯ ತುಡಿತವಿರುವ ಆಡಳಿತಗಾರರಾಗಿ ದಿ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಕೈಗೊಂಡ ನಿರ್ಧಾರಗಳು ಚರಿತ್ರಾರ್ಹವಾದುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 38ನೇ ಪುಣ್ಯ ಸ್ಮರಣೆ ಪ್ರಮುಕ್ತ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿದ್ದ ಕಾರ್ಯಕ್ರಮದಲ್ಲಿ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ಅರಸು ಜಾರಿಗೊಳಿಸಿದ ಭೂ ಸುಧಾರಣಾ ಕಾಯ್ದೆ, ಜೀತಮುಕ್ತಿ ಕಾಯ್ದೆ, ಋಣಪರಿಹಾರ ಕಾಯ್ದೆಯಂತಹ ಕ್ರಾಂತಿಕಾರಿ ನಿರ್ಧಾರಗಳು ಬಡವರು, ತಳಸಮುದಾಯದವರು, ಕೃಷಿ ಕಾರ್ಮಿಕರು ಸ್ವಾಭಿಮಾನದ ಬದುಕು ಸಾಧಿಸಲು ನೆರವಾದವು. ಸಾಮಾಜಿಕ ನ್ಯಾಯದ ಹರಿಕಾರ ಎಂಬ ಖ್ಯಾತಿಗೆ ಪಾತ್ರರಾದ ಅರಸು ಅವರು, ರಾಜ್ಯದ ಅಸಂಖ್ಯಾತ ಧ್ವನಿ ಇಲ್ಲದ ಜನಾಂಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದರು. ಹಾವನೂರು ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ  ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ದೊರಕಿಸಿಕೊಟ್ಟ ದೇವರಾಜು ಅರಸು ಅವರ ಸಾಧನೆಗೆ ಸಾಟಿಯಿಲ್ಲ ಎಂದು ಬಣ್ಣಿಸಿದರು.ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಜಾರಿಗೊಳಿಸಿದ್ದ  20 ಅಂಶಗಳ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ  ಕರ್ನಾಟಕದಲ್ಲಿ ಜಾರಿಗೊಳಿಸಿದರು. ಶೋಷಿತರು ಮತ್ತು ಹಿಂದುಳಿದ ಜನಾಂಗಕ್ಕೆ  ಶಕ್ತಿ ತುಂಬುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲಬೇಕು. ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ, ಸಮಾಜದ ದುರ್ಬಲ ವರ್ಗಕ್ಕೆ ಮಾಸಾಶನ ಮೂಲಕ ಬದುಕಿಗೆ ಭದ್ರತೆ, ನಿರುದ್ಯೋಗ ಭತ್ಯೆಯ ಮೂಲಕ ನಿರುದ್ಯೋಗಿ ಯುವಕರಿಗೆ ಬದುಕಿನ ಭರವಸೆಯನ್ನು ಮೂಡಿಸಿದ ಕಾರ್ಯಕ್ರಮ ದೇಶದಲ್ಲಿಯೇ ವಿನೂತನವಾಗಿದೆ ಎಂದರು.ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಅಧಿಕೃತವಾಗಿ ಘೋಷಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ್ದು, ಅಂದಿನ ಮಟ್ಟಿಗೆ ವಿನೂತನವೆನಿಸಿದ್ದ ತೀರ್ಮಾನವಾಗಿತ್ತು. ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂತಹ ಮಹಾನ್ ನಾಯಕ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆದು ಸಮಾಜದ ಸಮಗ್ರ ಅಭಿವೃದ್ಧಿ ಶ್ರಮಿಸಬೇಕು ಎಂದು ಹೇಳಿದರು.ಸಮಾಜ ಕಲ್ಯಾಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಿ.ಶ್ರೀರಾಮುಲು, ಬೈರತಿ ಬಸವರಾಜು, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.ಇದಕ್ಕೂ ಮೊದಲು ಸಸಿಯೊಂದನ್ನು ನೆಟ್ಟು ನೀರೆರಲಾಯಿತು.