ಮಂಜುಗುಣಿ ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
Chief Minister Siddaramaiah inaugurated the Manjuguni Bridge
ಕಾರವಾರ 22 :- ಅಂಕೋಲಾ ಮತ್ತು ಕುಮಟಾ ತಾಲೂಕಿನ ಜನತೆಯ ಬಹಳ ದಿನದ ಬೇಡಿಕೆಯಾದ, ಅಂಕೋಲಾದ ಮಂಜಗುಣಿ ಮತ್ತು ಕುಮಟಾ ತಾಲೂಕಿನ ಗಂಗಾವಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರೂ.34.21 ಕೋಟಿ ವೆಚ್ಚದ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗಂಗಾವಳಿ ನದಿಯನ್ನು ದಾಟಲು ಬಹಳ ಕಷ್ಟ. ಮಳೆಗಾಲದಲ್ಲಿ ನದಿಯನ್ನು ದಾಟಲು ಸಾಧ್ಯವಿಲ್ಲ. ಈ ಭಾಗದ ಜನರು ಸೇತುವೆ ನಿರ್ಮಾಣಕ್ಕಾಗಿ ಬೇಡಿಕೆ ಮತ್ತು ಹೋರಾಟಗಳನ್ನು ಮಾಡಿದ್ದರು. 2017 ರಲ್ಲಿ ಇಲ್ಲಿಗೆ ಭೇಟಿ ನೀಡಿ, ಪರೀಶೀಲಿಸಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದೆ, ನಾನೇ ಶಂಕುಸ್ಥಾಪನೆ ಮಾಡಿದ ಸೇತುವೆಯನ್ನು ಈಗ ಉದ್ಘಾಟಿಸುತ್ತಿರುವುದು ಬಹಳ ಸಂತೋಷವಾಗುತ್ತಿದೆ ಎಂದರು.
ಬಹಳ ಹಿಂದೆಯೇ ಈ ಸೇತುವೆ ಪೂರ್ಣಗೊಳ್ಳಬೇಕಿತ್ತು ಆದರೆ ಕಾರಣಾಂತರದಿಂದ ಹಿಂದಿನ ಸರ್ಕಾರ ಆಸಕ್ತಿ ವಹಿಸದಿದ್ದರಿಂದ ಈ ಸೇತುವೆ ಉದ್ಘಾಟನೆ ಮಾಡಲು ವಿಳಂಭವಾಯಿತು. ಒಂದು ವೇಳೆ ಸೇತುವೆಯಾಗದಿದ್ದರೆ ಸುಮಾರು 18 ಕಿ.ಮೀ ಬಳಸಿ ಈ ಭಾಗದ ಜನರು ಗಂಗಾವಳಿ ಗ್ರಾಮವನ್ನು ತಲುಪಬೇಕಾಗಿತ್ತು. ಈ ಸೇತುವೆ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಿದ್ದು, ಗೋಕರ್ಣ ಮತ್ತು ಅಂಕೋಲಾ ಭಾಗದ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಎಂದರು.
ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ, ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಜನರಿಗೆ ನಾನು ಏನು ಮಾಡಿದ್ದೇನೆ ಎಂಬುದನ್ನು ಮರೆತು ಮುಂದೆ ಏನು ಮಾಡಬೇಕು ಎಂಬುದನ್ನು ಯೋಚಿಸಬೇಕು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಜನರಿಗೆ ಏನು ಮಾಡಬೇಕು ಎಂಬುದು ಮುಖ್ಯವಾಗಿದೆ ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಪ್ರತಿಯೊಂದು ಕ್ಷೇತ್ರವನ್ನು ಅಭಿವೃದ್ಧಿಪಥಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಕಲ್ಲುಗಳಿಂದ ಗೋಡೆನು ಕಟ್ಟಿಕೊಳ್ಳಬಹುದು, ಸೇತುವೆಯನ್ನು ಕಟ್ಟಬಹುದಾಗಿದೆ ಆ ಸೇತುವೆ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಗೋಡೆ ಇಬ್ಬರನ್ನು ಇಬ್ಬಾಗ ಮಾಡುತ್ತದೆ. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರವಾಸಿಗರಿಗೆ ಮತ್ತು ಹೂಡಿಕೆದಾರರಿಗೆ ಅನುಕೂಲವಾಗುವ ಹೊಸ ಪ್ರವಾಸಿ ನೀತಿ ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿಯೇ ಉದ್ಯೋಗ ಸೃಷ್ಠಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಸಲಾಗುವುದು. 360 ಕಿ.ಮೀ ರಾಜ್ಯದ ಕರಾವಳಿ ತೀರ ಪ್ರದೇಶ ಪ್ರಕೃತಿ ಸೋಗಡು ರಾಜ್ಯ ಮತ್ತು ದೇಶಕ್ಕೆ ದೊಡ್ಡ ಆಸ್ತಿಯಾಗಿದೆ. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೊಸ ಯೋಜನೆ ರೂಪಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ. ಸೈಲ್ ಮಾತನಾಡಿ, 45 ದಶಕದಿಂದ ಈ ಭಾಗದಲ್ಲಿ ಸೇತುವೆ ಮಾಡಲು ಜನರ ಬೇಡಿಕೆ ಇದ್ದರೂ ಕೂಡ ಸೇತುವೆ ನಿರ್ಮಾಣ ಕೇವಲ ಪ್ರಣಾಳಿಕೆಯಲ್ಲಿ ಸಿಮಿತವಾಗಿತ್ತು. ಆದರೆ 2017 ರಲ್ಲಿ ಈ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದರು. ಈಗ ಅವರೇ ಉದ್ಘಾಟನೆ ಮಾಡುತ್ತಿರುವುದು ಸಂತೋಷವಾಗಿದೆ. ಇದರಿಂದ ಈ ಭಾಗದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಿದೆ. ನನಗೆ ಜನರ ಕೆಲಸ ಮಾಡುವುದೇ ನನ್ನ ಆದ್ಯ ಕರ್ತವ್ಯವಾಗಿದೆ. ಕಾರವಾರದಲ್ಲಿ ಈಗಾಗಲೇ ಮಲ್ಟಿ ಸ್ಪೆಷಾಲಟಿ ಆಸ್ಪತ್ರೆಯಾಗಿದೆ. ಜಿಲ್ಲೆಯ ಜನರ ಬಹು ಬೇಡಿಕೆಯ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯನ್ನು ಈ ಬಜೆಟ್ ನಲ್ಲಿ ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಬಹು ದಿನದ ಬೇಡಿಕೆಯಾಗಿದೆ. ಜಿಲ್ಲೆಯಲ್ಲಿ ಕುಣುಬಿ ಸಮಾಜದವರು ಬಹಳಷ್ಟು ಮಂದಿ ಇದ್ದು, ಪಕ್ಕದ ಗೋವಾ ರಾಜ್ಯದಲ್ಲಿ ಕುಣುಬಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿಯೂ ಕುಣುಬಿ ಮತ್ತು ಹಾಲಕ್ಕಿ ಒಕ್ಕಲಿಗರನ್ನು ಕುಣುಬಿ ಸಮಾಜವನ್ನು ಪರಿಶಿಷ್ಟ ಪಂಗಕ್ಕೆ ಸೇರಿಸಬೇಕು ಎಂದು ಮನವಿ ಮಾಡಿದರು.
ಶಾಸಕ ದಿನಕರ ಕೆ ಶೆಟ್ಟಿ ಮಾತನಾಡಿ, ಗೋಕರ್ಣಕ್ಕೆ ಪ್ರತಿ ದಿನ 50 ರಿಂದ 60 ಸಾವಿರ ಜನ ಪ್ರವಾಸಿಗರು ಆಗಮಿಸುತ್ತಿದ್ದು, ಗ್ರಾಮ ಪಂಚಾಯತಿ ವತಿಯಿಂದ ಇಲ್ಲಿನ ಸ್ವಚ್ಚತೆ, ಕುಡಿಯುವ ನೀರಿನ ಸಮಸ್ಯೆ ನಿಯಂತ್ರಿಸಲು ಸಾಧ್ಯವಿಲ್ಲ ಹೀಗಾಗಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರಿ್ವ ದೇಶಪಾಂಡೆ, ಶಾಸಕ ಭೀಮಣ್ಣ ಟಿ. ನಾಯ್ಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 