ತಮಿಳುನಾಡಿನಲ್ಲಿ ಪೊಂಗಲ್ ಉಡುಗೊರೆ, 1,000 ನಗದು ವಿತರಣೆ ಯೋಜನೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ಚಾಲನೆ

Chief Minister Palaniswamy

ಚೆನ್ನೈ, ನ 29- ಬರುವ ಜನವರಿಯಲ್ಲಿ ಆಚರಿಸಲಾಗುವ ಸುಗ್ಗಿ ಹಬ್ಬ ಪೊಂಗಲ್ ಹಬ್ಬಕ್ಕಾಗಿ ಪಡಿತರ ಚೀಟಿ ಹೊಂದಿರುವವರಿಗೆ 1,000 ನಗದು ಒಳಗೊಂಡ ವಿಶೇಷ ಉಡುಗೊರೆ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಶುಕ್ರವಾರ ಚಾಲನೆ ನೀಡಿದ್ದಾರೆ. 

ನಗದು ಮತ್ತು ಒಂದು ಕೆ.ಜಿ ಅಕ್ಕಿ, ಒಂದು ಕೆ.ಜಿ.ಸಕ್ಕರೆ, ಕಬ್ಬು, 20ಗ್ರಾಂ ಗೋಡಂಬಿ, ಐದು ಗ್ರಾಂ ಏಲಕ್ಕಯನ್ನು ಇಂದು ಇಲ್ಲಿನ ರಾಜ್ಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಪಳನಿಸ್ವಾಮಿ 16 ಫಲಾನುಭವಿಗಳಿಗೆ ವಿತರಿಸಿದರು. 

ಬರುವ ಜನವರಿ 15ರಂದು ಆಚರಿಸಲಾಗುವ ಪೊಂಗಲ್ ಹಬ್ಬಕ್ಕೂ ಮುನ್ನ ಎಲ್ಲ ಪಡಿತರ ಅಂಗಡಿಗಳಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ನಗದು ಜೊತೆಗೆ ವಿಶೇಷ ಉಡುಗೊರೆ ಪ್ಯಾಕೇಜ್ ನೀಡಲಾಗುವುದು. ಮುಂದಿನ ವರ್ಷಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಈ ಯೋಜನೆಗೆ ಸರ್ಕಾರ 2363.13 ಕೋಟಿ ರೂ. ತೆಗೆದಿರಿಸಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ. 

ಉಚಿತ ಪಂಚೆ ಮತ್ತು ಸೀರೆ ವಿತರಿಸುವ ಯೋಜನೆಗೂ ಪಳನಿಸ್ವಾಮಿ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಈ ಯೋಜನೆಯ ಭಾಗವಾಗಿ ಕೈಮಗ್ಗ ನೇಕಾರರಿಂದ ಸೀರೆ ಮತ್ತು ಪಂಚೆಗಳನ್ನು ಖರೀದಿಸಿ ಬಡವರಿಗೆ ವಿತರಿಸಲಾಗುವುದು.