ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭ
ಹುಕ್ಕೇರಿ 04: ಪಟ್ಟಣದ ಅಡವಿಸಿದ್ದೇಶ್ವರ ಮಠದ ಹತ್ತಿರ ಪ್ರತಿಷ್ಠಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಅನಾವರಣ ಸಮಾರಂಭ ಸೋಮವಾರ ದಿ.17 ರಿಂದ ಪ್ರಾರಂಭಗೊಂಡು ಬುಧವಾರ ದಿ.19 ರವರೆಗೆ ಜರುಗಲಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಂಘ ಮತ್ತು ಹುಕ್ಕೇರಿ ಸಮಸ್ತ ಮರಾಠಾ ಸಮಾಜದ ಅಧ್ಯಕ್ಷ ಪ್ರಸಾದ(ಪುಟ್ಟು) ಖಾಡೆ ಹೇಳಿದರು.
ಬುಧವಾರದಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಲ್ಲದ ಬಾಗೇವಾಡಿಯ ದಿ.ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೇಬಲ್ ಟೃಸ್ಟ್‌ನಿಂದ ಪ್ರತಿಮೆ ನಿರ್ಮಿಸಲಾಗಿದೆ. ಆ ಪ್ರತಿಮೆಯ ಅನಾವರಣ ಸಮಾರಂಭದ ನಿಮಿತ್ಯ ಸೋಮವಾರ 17ರಂದು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಬಸವ ಮಹಾಸ್ವಾಮಿಗಳು, ಅಭಿನವ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ಕೋರ್ಟ ಸರ್ಕಲ್‌ನಿಂದ ಅಡವಿಸಿದ್ದೇಶ್ವರ ಮಠದವರೆಗೆ ನಡೆಯಲಿರುವ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯ ಭವ್ಯ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ ಪಾಗೋಜಿ ಚಾಲನೆ ನೀಡುವರು.
ಮಂಗಳವಾರ 18ರಂದು ನಿಡಸೋಶಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಅಭಿನವ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 7 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯ ಪ್ರತಿಷ್ಠಾಪನೆ, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಉದ್ಘಾಟಿಸಲಿದ್ದಾರೆ.
ಬುಧವಾರ 19ರಂದು ನಿಡಸೋಶಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಮಹಾಸ್ವಾಮಿಗಳು, ಸಂಕೇಶ್ವರ ಶಂಕರಾಚಾರ್ಯ ಮಠದ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಮಹಾಸ್ವಾಮೀಜಿ, ಸ್ಥಳೀಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 9 ಗಂಟೆಗೆ ವಲ್ಲಭ ಗಡದಿಂದ ಬರುವ ಶಿವಜ್ಯೋತಿ ಸ್ವಾಗತಿಸಿ ನಂತರ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯ ಅನಾವರಣ ಸಮಾರಂಭ ನಡೆಯಲಿದೆ. ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ನಿಖಿಲ ಕತ್ತಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆತಿಥ್ಯ ವಹಿಸುವರು. ಮಾಜಿ ಸಂಸದ ರಮೇಶ ಕತ್ತಿ ಅವರು ಮೂರ್ತಿ ಅನಾವರಣೆ ನೆರವೇರಿಸಲಿದ್ದಾರೆಂದರು.
ಮುಖಂಡ ಸುನೀಲ ಭೈರಣ್ಣವರ ಮಾತನಾಡಿ ಜಿಲ್ಲೆಯ ಹಾಗೂ ತಾಲೂಕಿನ ಜನಪ್ರತಿನಿಧಿಗಳು, ಮುಖಂಡರು ಮತ್ತು ಗಣ್ಯರು ಸಮಾರಂಭಕ್ಕೆ ಆಗಮಿಸಲಿದ್ದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಾ ಸಮಾಜ ಬಾಂಧವರು ಮತ್ತು ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಮರಾಠಾ ಸಮಾಜದ ಉಪಾಧ್ಯಕ್ಷ ರಮೇಶ ತೇರಣಿ, ಕಾರ್ಯದರ್ಶಿ ಡಾ.ಸುರೇಶ ಉಪಾಶೆ, ಮುಖಂಡರಾದ ಮಾರುತಿ ಪವಾರ, ಸಿದ್ದೇಶ ಬೆನ್ನಾಡಿಕರ, ಸಂತೋಷ ಸಾವಳಗಿ, ಶಿವರಾಜ ತೇರಣಿ, ಚೇತನ ಪವಾರ, ರಾಜು ತೇರಣಿ ರಮೇಶ ದಳವಿ ಸೇರಿದಂತೆ ಅನೇಕರಿದ್ದರು.