ದಾಂಡೇಲಿಯ ಕಾಳಿನದಿ ಸೇತುವೆ ಮೇಲೆ ಉಳವಿಗೆ ತೆರಳುತ್ತಿರುವ ಚಕ್ಕಡಿಗಾಡಿಗಳು

ದಾಂಡೇಲಿಯ ಕಾಳಿನದಿ ಸೇತುವೆ ಮೇಲೆ ಉಳವಿಗೆ ತೆರಳುತ್ತಿರುವ  ಚಕ್ಕಡಿಗಾಡಿಗಳು  Chakkadi gadis going to Ula on the Kali Nadi Bridge in Dandeli

      ದಾಂಡೇಲಿ ಜ 31 : ಉಳವಿ ಶ್ರೀ ಚೆನ್ನ ಬಸವೇಶ್ವರ ಜಾತ್ರೆಗೆ ರವಿವಾರ ವಿದ್ಯುಕ್ತ ಚಾಲನೆ ದೊರಕುತ್ತಿದ್ದಂತೆ  ಉತ್ತರ ಕರ್ನಾಟಕದ  ವಿವಿಧ ಹಳ್ಳಿಗಳಿಂದ ಭಕ್ತಾದಿಗಳು ಕುಟುಂಬ ಸಮೇತರಾಗಿ ದಾಂಡೇಲಿಯತ್ತ ಪಯಣಿಸಿದ್ದಾರೆ. ಜಾತ್ರೆ ಆರಂಭವಾಗುತ್ತಿದ್ದಂತೆ ದಾಂಡೇಲಿಯ ಕೋಗಿಲಬನದ  ಮೃತ್ಯುಂಜಯ ಮಠದಲ್ಲಿ ಭಕ್ತಾದಿಗಳು ವಿಶ್ರಾಂತಿ ಪಡೆದು ಮುಂದಕ್ಕೆ ಪಯಣಿಸುತ್ತಿದ್ದಾರೆ. ದಿನಕಳೆದಂತೆ ಚಕ್ಕಡಿಗಳಲ್ಲಿ ಕುಟುಂಬ ಸಮೇತ ಜಾತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಲಿದೆ. ಭಕ್ತರ ಅನುಕೂಲಕ್ಕಾಗಿ     ಮೃತ್ಯುಂಜಯ ಮಠದಲ್ಲಿ ದಾಸೋಹದ ಸಿದ್ದತೆ ನಡೆಯುತ್ತಿದೆ. ಚಕ್ಕಡಿ ನಿಲ್ಲಿಸಲು, ಎತ್ತುಗಳ ವಿಶ್ರಾಂತಿಗೆ, ಅವುಗಳ ದೇಖರಿಕೆಗೆ ಬೇಕಾದ ವ್ಯವಥೆಗಳನ್ನು ಕಲ್ಪಿಸಲಾಗಿದೆ.  

       ಉಳವಿ ಜಾತ್ರೆ ಚಕ್ಕಡಿ ಸಂಪ್ರದಾಯ: ಉಳವಿ ಚೆನ್ನ ಬಸವೇಶ್ವರ ಜಾತ್ರೆಯು ಉತ್ತರ ಕರ್ನಾಟಕದ ಭಕ್ತರಿಗೆ ಅತ್ಯಂತ ಪವಿತ್ರವಾಗಿದೆ. ವಿಜಯಪುರ,ಬಾಗಲಕೋಟೆ, ಬೆಳಗಾವಿ , ಧಾರವಾಡ ಜಿಲ್ಲೆಗಳಿಂದ ನೂರಾರು ಚಕ್ಕಡಿಗಾಡಿಗಳಲ್ಲಿ ಭಕ್ತರು ಕುಟುಂಬ ಸಮೇತರಾಗಿ ದಟ್ಟ ಕಾಡುಗಳನ್ನು ದಾಟಿ ಉಳವಿಗೆ ಬರುವದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ. ಈ ಪಯಣದಲ್ಲಿ ಹರ ಹರ ಮಹಾದೇವ ಘೋಷಣೆಯೊಂದಿಗೆ ರೈತರು ತಮ್ಮ ಎತ್ತುಗಳೊಂದಿಗೆ ನೂರಾರು ಕಿಲೋ ಮೀಟರ ಕ್ರಮಿಸುತ್ತಾರೆ. ಜಾತ್ರೆಯ ಆರಂಭಕ್ಕೂ ಮುನ್ನ ಮುರಾ​‍್ನಲ್ಕುದಿನ ಮುಂಚಿತವಾಗಿ ಹೋರಟು ಹತ್ತು ಹನ್ನೆರಡು ದಿನಗಳ ಕಾಲ ಉಳವಿಯಲ್ಲಿ ಬೀಡು ಬಿಡುತ್ತಾರೆ.

      ಆಧುನಿಕವಾಹನಗಳಿದ್ದರೂ ಚಕ್ಕಡಿಯಲ್ಲಿ ಬರುವದು  ಇಲ್ಲಿನ ಭಕ್ತರ ಪ್ರತಿಷ್ಠೆ ಮತ್ತು ಸಂಪ್ರದಾಯದ ಭಾಗವಾಗಿದೆ. ಈ ವರ್ಷ ಸುಮಾರು 2000 ಚಕ್ಕಡಿಗಾಡಿಗಳು ಬರುವ ನೀರೀಕ್ಷೆಯಿದೆ ಎಂದು ಉಳವಿ ಚೆನ್ನ ಬಸವೇಶ್ವರ ಟ್ರಸ್ಟನ ಅಧ್ಯಕ್ಷರು ತಿಳಿಸಿದ್ದಾರೆ. ಈ ಚಕ್ಕಡಿಗಳಲ್ಲಿ ಬರುವ ಭಕ್ತಾದಿಗಳು ತಮ್ಮೊಂದಿಗೆ ಧಾನ್ಯ, ಅಡುಗೆ ಸಾಮಾಗ್ರಿಗಳನ್ನು ತಂದು ದಟ್ಟಾರಣ್ಯ, ಕಾಳಿ ನದಿಯ ದಂಡೆಗಳಲ್ಲಿ ಉಳಿದು ದಾಸೋಹ ಮಾಡುತ್ತಾರೆ. ಈ ಚಕ್ಕಡಿ ಪಯಣವು ಉತ್ತರ ಕರ್ನಾಟಕದ ರೈತರ ಸಂಸ್ಕೃತಿ ಮತ್ತು ದೈವ ಭಕ್ತಿಯ ಅನನ್ಯ ಸಂಗಮವಾಗಿದೆ. ಕಾಡು ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಾ ಚಕ್ಕಡಿಗಾಡಿಯಲ್ಲಿ ಪಯಣಿಸುವದು ಈ ಜನರಿಗೆ ಪ್ರತಿಷ್ಠೆಯ ಸಂಕೇತವಾಗಿದೆ.