ಸಾಮ್ರಾಟ ಅಶೋಕ ಮಹಾರಾಜರ ಜಯಂತಿ ಆಚರಣೆ
ಚಿಕ್ಕೋಡಿ, 07 : ಸಾಮ್ರಾಟ ಅಶೋಕ ಅಹಿಂಸೆಗೆ ಮಹತ್ವ ನೀಡಿ, ಶಾಂತಿ ಮಂತ್ರವನ್ನು ಜಪಿಸಿ ನಾಡಿಗೆ ಒಳಿತು ಬಯಿಸಿದ ಅರಸನಾಗಿದ್ದನು. ಪರೋಪಕಾರಿಯಾಗಿದ್ದ ಆಶೋಕನ ಹಾದಿಯಲ್ಲಿ ಇಂದು ನಾವೆಲ್ಲರೂ ನಡೆಯಬೇಕೆಂದು ಮುಖಂಡ ರಾಜೀವ ಕಾಂಬಳೆ ಹೇಳಿದರು.
ಪಟ್ಟಣದ ಅಶೋಕನಗರ ಬಡಾವಣೆಯ ನಿವಾಸಿಗಳು ಹಮ್ಮಿಕೊಂಡಿದ್ದ ಸಾಮ್ರಾಟ ಅಶೋಕನ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾರತದ ಇತಿಹಾಸದಲ್ಲಿಯೇ ಅಶೋನಂತಹ ದೊರೆ ಬೇರೊಬ್ಬರಿಲ್ಲ. ರಾಜನಾಗಿದ್ದರೂ ಸಾಮಾನ್ಯ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದನ್ನು ಇಂದಿನ ರಾಜಕಾರಣಿಗಳು ತಿಳಿದುಕೊಂಡು ನಡೆಯಬೇಕೆಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ,ಎಸ್ ಪಿ ತಳವಾರ ಮಾತನಾಡಿ ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ಶಸ್ತ್ರ ತ್ಯಾಗ ಮಾಡಿದ್ದು ವಿಶ್ವಕ್ಕೇ ಪಾಠವಾಗಬೇಕಿತ್ತು. ಹೀಗಿದ್ದರೂ ಇಂದಿಗೂ ಹಲವು ದೇಶಗಳು ಬದ್ಧ ವೈರತ್ವದಿಂದ ಹಿಂಸೆಯ ಹಾದಿ ತುಳಿಯುತ್ತಿರುವುದರ ಕುರಿತು ವಿಷಾಧ ವ್ಯಕ್ತಪಡಿಸಿದರು.
ಸಮಾಜ ಸೇವಕ ಎಂ ಆರ್ ಮುನ್ನೋಳಿಕರ ಮಾತನಾಡಿ ಮುಂಬರುವ ದಿನಗಳಲ್ಲಿ ಸಾಮ್ರಾಟ ಅಶೋಕ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ವಿಶೇಷ ಪ್ರಯತ್ನ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸಾಮ್ರಾಟ ಅಶೋಕ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಿ.ಎಸ್ ಕಾಂಬಳೆ, ಮಂಜುಳಾ ಕಾಳೆ, ಶಂಭು ಕರೆಪ್ಪಗೋಳ, ಉತ್ತಮ ಕಾಂಬಳೆ, ಪ್ರವೀಣ ಸಂಜುಗೋಳ, ಎನ್.ಬಿ. ಪಾಟೀಲ, ಬಿ. ಎಸ್. ಬಣದೆ, ಎಂಎಸ್ ಹೊಸಮನಿ, ಎಂಎ ಕುರಣೆ, ವಿಶಾಲ ಕಾಂಬಳೆ ಮುಂತಾದವರು ಭಾಗವಹಿಸಿದ್ದರು.