ಬೆಂಗಳೂರು, ಫೆ 4- ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಉತ್ತರ ಕನ್ನಡ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಿಸಿದ್ದ 50ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗೋಕರ್ಣ ಠಾಣೆಯಲ್ಲಿ 2015 ರಲ್ಲಿ ದಾಖಲಿಸಿರುವ 51 ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧು ಸ್ವಾಮಿ, ಸ್ವಾಮೀಜಿ ವಿರುದ್ಧ ಯಾವ ಯಾವ ಪ್ರಕರಣಗಳನ್ನು ಕೈ ಬಿಡಲಾಗಿದೆ ಎನ್ನುವ ಮಾಹಿತಿ ನೀಡಲು ನಿರಾಕರಿಸಿದರು.
ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ರಾಜ್ಯದ 351 ಕಲ್ಯಾಣ ಸಂಸ್ಥೆಗಳಿಗೆ ಸ್ಥಗಿತಗೊಳಿಸಿದ್ದ ಅಕ್ಕಿ ಮತ್ತು ಗೋದಿಯನ್ನು ದಾಸೋಹ ಯೋಜನೆಯಡಿ ಮುಂದುವರೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ರಾಜ್ಯದ 37,700 ವಿದ್ಯಾರ್ಥಿಗಳು 351 ಕಲ್ಯಾಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದು, ಈ ಸಂಸ್ಥೆಗಳಿಗೆ ಒಂದು ವರ್ಷಗಳ ಕಾಲ ಆಹಾರ ಧಾನ್ಯ ಒದಗಿಸಲು ದಾಸೋಹ ಯೋಜನೆಯ 18 ಕೋಟಿ ರೂ ವೆಚ್ಚ ಮಾಡುವ ಪ್ರಸ್ತಾವನೆಗೆ ಅಂಗೀಕಾರ ನೀಡಲಾಗಿದೆ ಎಂದರು.
ಗುಲ್ಬರ್ಗಾ ವಿಶ್ವವಿದ್ಯಾಲಯವನ್ನು ವಿಭಜಿಸಿ ರಾಯಚೂರು ವಿ.ವಿ. ಸ್ಥಾಪನೆಮಾಡಲು ಸಂಪುಟ ಆಡಳಿತಾತ್ಮಕ ಅನುಮೋದನೆ ಕೊಟ್ಟಿದೆ.
ಜತೆಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 3 ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನಲಿ,ಕಲಿ ಯೋಜನೆಯಡಿ ಕಲಿತಾ ಸಾಮಗ್ರಿಗಳನ್ನು 27 ಕೋಟಿ ರೂ ವೆಚ್ಚದಲ್ಲಿ ಒದಗಿಸುವ ಜತೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿರುವ ಹಲವು ಆಂಬ್ಯುಲೆನ್ಸ್ ಗಳು ಹಳೆಯದಾಗಿದ್ದು, ಹೊಸದಾಗಿ 120 ಆಂಬ್ಯುಲೆನ್ಸ್ ಗಳನ್ನು 31.04 ಕೋಟಿ ರೂ ವೆಚ್ಚದಲ್ಲಿ ಖರೀದಿಸಲು ಸಂಪುಟ ಅಂಗೀಕಾರ ನೀಡಿದೆ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಡಿ ಬಾಲಕಿಯರ ವಸತಿ ಗೃಹ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದರ ಅಂದಾಜು ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ 263 ಕೋಟಿ ರೂ ಹೆಚ್ಚುವರಿ ಕ್ರಿಯಾ ಯೋಜನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು ಎಂದರು.
ಬೆಂಗಳೂರಿನಲ್ಲಿರುವ ಕೇಂದ್ರಕಾರಾಗೃಹದ ಎರಡನೇ ಘಟಕಕ್ಕೆ 10.56 ಕೋಟಿ ರೂ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಕಟ್ಟಡ ಅಗತ್ಯವಿರುವುದನ್ನು ಮನಗಂಡು ಖನಿಜ ಭವನದ ಪಕ್ಕದಲ್ಲಿರುವ ಜಾಗದಲ್ಲಿ 13.5 ಕೋಟಿ ರೂ ವೆಚ್ಚದಲ್ಲಿ ನಿರ್ವಚನಾ ನಿಲಯದ ವಿಸ್ತರಣಾ ಕಚೇರಿ ನಿರ್ಮಾಣಕ್ಕೆ ಅನುಮತಿ ಕೊಡಲಾಗಿದೆ.
ಬೀದರ್ ನಲ್ಲಿ ವಿಶಿಷ್ಟ ಕಾರಾಗೃಹ ನಿರ್ಮಾಣಕ್ಕೆ 99.95 ಕೋಟಿ ರೂ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಕೌಶಲ್ಯಾಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಪಂಗಡದ ಅನುದಾನಿತ ಮತ್ತು ಖಾಸಗಿ ಐಟಿಐಗಳಲ್ಲಿ ಅಧ್ಯಯನ ಮಾಡುತ್ತಿರುವ 3,404 ವಿದ್ಯಾರ್ಥಿಗಳಿಗೆ 7.30 ಕೋಟಿ ರೂ ವೆಚ್ಚದಲ್ಲಿ ಉಚಿತ ಲ್ಯಾಪ್ ಟಾಪ್ ವಿತರಿಸಲು ಸಂಪುಟ ಸಮ್ಮತಿಸಿದೆ.
ಕೊಪ್ಪಳ ಜಿಲ್ಲೆಯ ಹಿರೇಹಳ್ಳಿಯಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಒದಗಿಸುವ ಏತ ನೀರಾವರಿ ಯೋಜನೆಯ 89.86 ಕೋಟಿ ರೂ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಕುರಿತಂತೆ ಮೆಸಸ್ ರೈಟ್ಸ್ ಕಂಪೆನಿಗೆ ಅನುಮೋದನೆ ನೀಡಿದ್ದು, ಸುಮಾರು 220ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯನ್ನು ಈ ಸಂಸ್ಥೆಗೆ ವಹಿಸಲು ಅನುಮತಿ ಕೊಡಲಾಗಿದೆ.