ಒಲಿಂಪಿಕ್ಸ್ ಮೇಲೆ ಕೊರೊನಾ ಕರಿನೆರಳು!

ಲೂಸನ್, ಮಾ19 :-ಕೋವಿಡ್ -19 ವೈರಸ್ ಈಗಾಗಲೇ ಜಗತ್ತಿನಾದ್ಯಂತ ಹಲವು ಕ್ರೀಡಾ ಚಟುವಟಿಕೆಗಳನ್ನು ನುಂಗಿಯಾಕಿದರೆ, ಕೆಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ. ಇದುವರೆಗೂ ಒಲಿಂಪಿಕ್ಸ್ ಕ್ರೀಡಾಕೂಟ ನಿಗದಿತ ಅವಧಿಯಲ್ಲಿ ನಡೆಯಲಿದೆ ಎನ್ನುತ್ತಿದ್ದ ಟೂರ್ನಿಯ ಸಂಘಟಕರು, ಕೊರೊನಾ ವೈರಸ್ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಟೂರ್ನಿ ಆರಂಭವಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಸಕಾಲದಲ್ಲಿ ನಡೆಸುವುದು ಕಠಿಣವಾಗಲಿದೆ ಎಂದಿದ್ದಾರೆ. ಕೊರೊನಾ ಸೋಂಕು ಎಗ್ಗಿಲ್ಲದೆ ವ್ಯಾಪಿಸುತ್ತಿರುವ ಕಾರಣ ಪ್ರಮುಖ ಅಥ್ಲೀಟ್ ಗಳು ಕಳವಳ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ಮಾತುಗಳನ್ನಾಡಿದ್ದಾರೆ. ಇದೊಂದು ಅಸಾಧಾರಣವಾದ ಸನ್ನಿವೇಶ. ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳುವುದು ಕಷ್ಟ ಎಂದು ಸಮಿತಿಯ ವಕ್ತಾರ ಹೇಳಿದ್ದಾರೆ. ಸೋಂಕು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಈ ಮಧ್ಯೆ, ಪೂರ್ವನಿಗದಿಯಂತೆ ಜುಲೈ 24ರಿಂದ ಕ್ರೀಡೆಗಳನ್ನು ನಡೆಸಿದರೆ ಆರೋಗ್ಯವನ್ನು ಪಣಕ್ಕಿಡಬೇಕಾಗುತ್ತದೆ ಎಂದು ಹಿರಿಯ ಅಥ್ಲೀಟ್ ಗಳು ಆತಂಕ ತೋಡಿಕೊಂಡಿದ್ದಾರೆ. ಸ್ಪರ್ಧೆಗಳ ಪಾವಿತ್ರ್ಯತೆ ಉಳಿಸುವ ಮತ್ತು ಅಥ್ಲೀಟ್ ಗಳ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಐಒಸಿ ಬದ್ಧವಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಹೀಗಾಗಿ ಜಪಾನ್ ಟೋಕಿಯೊದಲ್ಲಿ ನಡೆಯಬೇಕಿರುವ ಒಲಿಂಪಿಕ್ಸ್ ಕ್ರೀಡಾಕೂಟ ಜಾಗತಿಕ ಪಿಡುಗಿಗೆ ಬಲಿಯಾಗುವ ಸಾಧ್ಯತೆ ದಟ್ಟವಾಗಿದೆ.