ನವದೆಹಲಿ 10 (ಯುಎನ್ಐ): ಎಎಪಿ ನಾಯಕಿ ಅತಿಶಿ ಅವರ ವಿರುದ್ಧ ಅವಹೇಳನಕಾರಿ ಬರಹಗಳುಳ್ಳ ಕರಪತ್ರ ಹಂಚಿದ್ದಾರೆ ಎಂದು ತಮ್ಮ ಮೇಲೆ ಆರೋಪ ಮಾಡಿದ್ದ ಎಎಪಿಯ ಮೂವರು ನಾಯಕರಿಗೆ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಶುಕ್ರವಾರ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಬೇಷರತ್ ಕ್ಷಮೆಯಾಚಿಸಬೇಕು ಹಾಗೂ ಮಾಡಿದ ಆರೋಪವನ್ನು ಹಿಂದಕ್ಕೆ ಪಡೆಯಬೇಕು ಎಂದು ನೋಟಿಸ್ನಲ್ಲಿ ಗಂಭೀರ್ ಒತ್ತಾಯಿಸಿದ್ದಾರೆ.
ಗುರುವಾರ ಪೂರ್ವ ದೆಹಲಿಯ ಎಎಪಿ ಅಭ್ಯರ್ಥಿ ಅತಿಶಿ ಅವರು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ವಿರುದ್ಧ ಗಂಭೀರ್ ಅವರು ಅವಹೇಳನಕಾರಿ ಹಾಗೂ ಅಶ್ಲೀಲ ಬರಹಗಳುಳ್ಳ ಕರಪತ್ರಗಳನ್ನು ತಮ್ಮ ಕ್ಷೇತ್ರದಲ್ಲಿ ಹಂಚಿದ್ದಾರೆ ಎಂದು ಆರೋಪಿಸಿದ್ದರು. ಮಾತ್ರವಲ್ಲ ಆ ಕರಪತ್ರವನ್ನು ಓದುವಾಗ ಅವರು ಕಣ್ಣೀರು ಹಾಕಿ, ಇದನ್ನು ತಮ್ಮ ವಿರೋಧಿ ಗಂಭೀರ್ ಅವರೇ ಹಂಚಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ಅಭ್ಯರ್ಥಿ ಗಂಭೀರ್, ಇದು ತಮ್ಮ ವಿರುದ್ಧ ಎಎಪಿ ಮಾಡಿರುವ ಸಂಚು ಎಂದು ಆರೋಪಿಸಿದ್ದರು. ಮಾತ್ರವಲ್ಲ ಈ ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸವಾಲು ಹಾಕಿದ್ದರು. ಬಳಿಕ ಗಂಭೀರ್ ಸರಣಿ ಟ್ವೀಟ್ ಮಾಡಿ, ಕೇಜ್ರಿವಾಲ್ ವಿರುದ್ಧ ಹರಿಹಾಯ್ದು, ಮಹಿಳೆಯ ಗೌರವಕ್ಕೆ ಕೇಜ್ರಿವಾಲ್ ಧಕ್ಕೆ ತಂದಿದ್ದಾರೆ ಎಂದು ಟೀಕಿಸಿದ್ದರು.