ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಮನವಿ

Bridge Co. requested to construct the barrage

ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಮನವಿ  

ತಾಳಿಕೋಟೆ 10 : -ತಮದಡ್ಡಿ ಹಳೆ ಚಕ್ಕಡಿ ರಸ್ತೆಯ ಮಧ್ಯದಲ್ಲಿ ಹರಿಯುವ ಡೋಣಿ ನದಿಗೆ ಅಡ್ಡಲಾಗಿ ಬ್ರಿಜ್ ಕಂ. ಬ್ಯಾರೆಜ್ ನಿರ್ಮಿಸಿಕೊಡುವಂತೆ ಕೋರಿ ಜಿಲ್ಲಾಧಿಕಾರಿ, ಕೆಬಿಜೆಎನ್ನೆಲ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಮುಖ್ಯ ಅಭಿಯಂತರ ಅವರಿಗೆ ಬರೆದ ಮನವಿಯನ್ನು ಪಟ್ಟಣದ ರೈತರು ಹಾಗೂ ಸಾರ್ವಜನಿಕರು ತಹಶೀಲ್ದಾರ ಕೀರ್ತಿ ಚಾಲಕ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಮನವಿಯಲ್ಲಿ ತಾಳಿಕೋಟೆ-ತಮದಡ್ಡಿ ಗ್ರಾಮದ ಮಧ್ಯ ಪುರಾತನ ಕಾಲದಿಂದಲೂ ಸುಮಾರು 10-15 ಅಡಿ ಆಗಲದ ಸರ್ಕಾರಿ ಚಕ್ಕಡಿ ರಸ್ತೆ ಇದ್ದು, ಅದರ ಬಗ್ಗೆ ತಾಳಿಕೋಟೆ ಸೀಮೆಯ ಜಮೀನುಗಳ ನಕಾಶೆಯಲ್ಲಿ ನಮೂದ ಇರುತ್ತದೆ. ಈ ಪೂರ್ವದಲ್ಲಿ ಈ ರಸ್ತೆಯ ಮುಖಾಂತರವೆ ತಾಳಿಕೋಟೆ ಪಟ್ಟಣಕ್ಕೆ ಹಿರೂರ-ತಮದಡ್ಡಿ ಗ್ರಾಮದ ಜನ ಬಂದು ಹೋಗುವದನ್ನು ಮಾಡುತ್ತಿದ್ದರು. ಅಷ್ಟೆಯಲ್ಲದೆ ಆ ರಸ್ತೆಗೆ ಹೊಂದಿಕೊಂಡಿರುವ ಜಮೀನಿನ ರೈತರು ಆಗಿನಿಂದಾ ಈಗಿನವರೆಗೂ ತಮ್ಮ ಜಮೀನುಗಳಿಗೆ ಗಳೆ-ಗಾಡಿ ತೆಗೆದುಕೊಂಡು ಹೋಗಲು ಸಹ ಈ ಚಕ್ಕಡಿ ರಸ್ತೆಯನ್ನೇ ಬಳಸುತ್ತಿದ್ದಾರೆ. ಈ ರಸ್ತೆಯನ್ನು ಹೊರತುಪಡಿಸಿ ರೈತರಿಗೆ ಬೇರೆ ಯಾವುದೇ ರಸ್ತೆ ಇರುವದಿಲ್ಲಾ. ಆದರೆ  ರಸ್ತೆಗೆ ಅಡ್ಡಲಾಗಿ ಡೋಣಿ ನದಿಗೆ  ಕೃಷ್ಣಾ ಮೇಲ್ದಂಡೆ ಯೋಜನೆಯ  ಚಿಮ್ಮಲಗಿ ಹಾಗೂ ಮುಳವಾಡ ಏತನೀರಾವರಿಯ ಕಾಲುವೆಗಳ ಬಳಕೆಯಿಂದಾ ಹೆಚ್ಚಾಗಿ ಉಳಿದ ನೀರು (ಎಕ್ಸೆಸ್ ವಾಟರ್) ಡೋನಿ ನದಿಯನ್ನು ಸೇರುತ್ತಿರುವುದರಿಂದ  ಡೋಣಿ ನದಿಯಲ್ಲಿ ಈಗ ವರ್ಷದ ಪೂರ್ಣಾವಧಿಯ ವರೆಗೆ ನೀರು ಹರಿಯುತ್ತಿದೆ. ಇದರಿಂದ ಹೆಚ್ಚುವರಿ ನೀರು ಹಾಗೆಯೇ ಸುಮ್ಮನೆ ಪೋಲಾಗಿ ಹೋಗುತ್ತಿದೆ. ಡೋಣಿ ನದಿಯ ನೀರು ಮಳೆಗಾಲದಲ್ಲಿ ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿ ಹರಿದು ಡೋಣಿ ನದಿ ಪಾತ್ರದ ರೈತರಿಗೆ ತಮ್ಮ ಹೊಲಗಳಿಗೆ ತಾಳಿಕೋಟೆ-ತಮದಡ್ಡಿ ಹಳಿ ಚಕ್ಕಡಿ ರಸ್ತೆಯ ಮುಖಾಂತರ ತಲುಪಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ನಿರ್ದಿಷ್ಟ ಸಮಯದಲ್ಲಿ ರೈತರು ತಮ್ಮ ಜಮೀನುಗಳನ್ನು ಉತ್ತುವದನ್ನು ಮಾಡಲು ಸಾಧ್ಯವಾಗದೇ ಹಾನಿಗೊಳಗಾಗುತ್ತಿದ್ದಾರೆ. ಆದ್ದರಿಂದಾ ಈ ತಾಳಿಕೋಟೆ-ತಮದಡ್ಡಿ ಹಳೆ ಚಕ್ಕಡಿ ರಸ್ತೆಯ ಮಧ್ಯದಲ್ಲಿ ಹರಿಯುವ ಡೋಣಿ ನದಿಗೆ ಅಡ್ಡಲಾಗಿ ಬ್ರಿಜ್ ಕಂ. ಬ್ಯಾರೆಜ್ ನಿರ್ಮಿಸಿಕೊಡುವಂತೆ ಅವರು ಕೋರಿದ್ದಾರೆ. ಇದರಿಂದ ಸಂಚಾರಕ್ಕೆ ರಸ್ತೆ ಹಾಗೂ ಬ್ಯಾರೇಜ್ ನಿಂದ ನೀರು ಸಂಗ್ರಹವಾಗಿ ರೈತರು ಅದನ್ನು ನೀರಾವರಿಗೆ ಬಳಸಲು ಸಹಾಯವಾಗುತ್ತದೆ ಎಂದಿದ್ದಾರೆ. ಈ ಸಮಯದಲ್ಲಿ ಇಮಾಮ ಹುಸೇನ ಚೋರಗಸ್ತಿ, ಅಲ್ಲಾಭಕ್ಷ ಕಾಳಗಿ, ಕರಿಮಸಾಬ ಜಮಾದಾರ, ಶಬ್ಬೀರ ಅಹಮ್ಮದ ಚೋರಗಸ್ತಿ, ತಿಪ್ಪಣ್ಣ ನಾಯ್ಕೊಡಿ, ಕರಿಮಸಾಬ ಚೋರಗಸ್ತಿ, ಚನ್ನಪ್ಪ ನಾರಿ, ಸಂಗಣ್ಣ ಯಾಳವಾರ, ಪರಶುರಾಮ ತಂಗಡಗಿ,ಕಾಶಿನಾತ ಯಾಳವಾರ, ಸುರೇಶ ನಾರಿ ಸೇರಿದಂತೆ ಇತರರು ಸೇರಿ 25ಕ್ಕೂ ಅಧಿಕ ಜನ ಸಹಿ ಮಾಡಿದ ಮನವಿ ಪತ್ರವನ್ನು ಸಲ್ಲಿಸಿದರು.