ರಕ್ತದಾನ ಮಹಾದಾನ, ಪ್ರತಿಯೊಬ್ಬರೂ ರಕ್ತದಾನ ಮಾಡಿ : ಶಾಸಕ ಜೆ.ಎನ್.ಗಣೇಶ
ಕಂಪ್ಲಿ 30: ರಕ್ತದಾನ ಮಹಾದಾನ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು. ರಕ್ತದಾನದಿಂದ ಒಂದು ಜೀವ ಉಳಿಸಿದಂತಾ ಗುತ್ತದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. ತಾಲೂಕಿನ ಎಮ್ಮಿಗನೂರು ಗ್ರಾಪಂ ವ್ಯಾಪ್ತಿಯ ಹಳೆ ನೆಲ್ಲುಡಿ ಗ್ರಾಮದಲ್ಲಿ ಹಜರತ್ ಕಾಶೀಂಸಾಬ್ ದಾದರವರ 93ನೇ ವರ್ಷದ ಉರುಸ್ ಪ್ರಯುಕ್ತ ನೆಲ್ಲುಡಿ, ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನದ ಬಗ್ಗೆ ಕೆಲವೊಂದು ಮೂಢನಂಬಿಕೆಗಳಿವೆ. ಪ್ರತಿಯೊಬ್ಬರೂ ಇಂಥ ಮೂಢ ನಂಬಿಕೆಗಳಿಂದ ಹೊರಬಂದು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಪುಣ್ಯ ಲಭಿಸುವುದರ ಜೊತೆಗೆ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ ನಮಗೂ ಉತ್ತಮ ಆರೋಗ್ಯ ಭಾಗ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಕಿವಿಮಾತು ಕೇಳಿದರು. ಈ ಶಿಬಿರದಲ್ಲಿ 55ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಬಳ್ಳಾರಿ ಸ್ವಾಮಿ ವಿವೇಕಾನಂದ ರಕ್ತ ಕೇಂದ್ರದಿಂದ ರಕ್ತ ಸಂಗ್ರಹಿಸಲಾಯಿತು. ನಂತರ ರಕ್ತದಾನ ಮಾಡಿದ ಜನರಿಗೆ ಶಾಸಕರು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕಾಶೀಂಸಾಬ್, ರಾಜಾಸಾಬ್, ವೈದ್ಯಾಧಿಕಾರಿ ಡಾ.ಫಾರುಕ್, ಸಿಬ್ಬಂದಿಗಳಾದ ಎಂ.ವಿಘ್ನೇಶ್ವರ, ಎನ್.ಕೆ.ನಂದಾ, ಬಳ್ಳಾರಿ ಸ್ವಾಮಿ ವಿವೇಕಾನಂದ ರಕ್ತ ಕೇಂದ್ರದ ವ್ಯವಸ್ಥಾಪಕ ಮಂಜುನಾಥ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.