ಬಳ್ಳಾರಿ 06: ಜಿಲ್ಲೆಯಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಸರಕಾರ ನಿರ್ಧರಿಸಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೈಗಾರಿಕೋದ್ಯಮಿಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲಕ ಇಲ್ಲಿದೆ. ಅದನ್ನು ಬಳಸಿಕೊಂಡು ಹೊಸ ಕೈಗಾರಿಕೆ ಘಟಕಗಳು, ಗಾರ್ಮೆಂಟ್ಸ್ ಸ್ಥಾಪನೆ ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ಭಾಗದಲ್ಲಿ ಜಿನ್ಸ್ ಉತ್ಪಾದನೆಗೆ ಹೆಚ್ಚಿನ ಅದ್ಯತೆ ನೀಡುವುದರ ಮೂಲಕ ಆ ಕೈಗಾರಿಕೆಗಳನ್ನು ನಮ್ಮ ಸರಕಾರ ಉತ್ತೇಜಿಸಲಿದೆ ಎಂದು ಅವರು ಭರವಸೆ ನೀಡಿದರು.
ಬಳ್ಳಾರಿಯಲ್ಲಿ ಬೃಹತ್ ಕಾರಖಾನೆಗಳಿಂದ ಅಪಾರ ಪ್ರಮಾಣದ ವಾಯುಮಾಲಿನ್ಯ ಉಂಟಾಗುತ್ತಿದೆ ಎಂಬ ದೂರುಗಳು ಬಂದಿದ್ದು, ವಾಯುಮಾಲಿನ್ಯ ಆಗದ ರೀತಿಯಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಮತ್ತು ಕಾರಖಾನೆಗಳ ಸುತ್ತಮುತ್ತಲಿನ ಜನರ ಜೀವನ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಬೇಕು ಹಾಗೂ ಕಾರಖಾನೆಗಳ ಸುತ್ತಮುತ್ತಲಿನ ಕುಡಿಯುವ ನೀರಿನ ಕೆರೆಗಳು ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ತುಷಾರಮಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ಇಫರನ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಇದ್ದರು.