ಲೋಕದರ್ಶನ ವರದಿ
ಬಳ್ಳಾರಿ 30: ಜಿಲ್ಲೆಯ ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ ಪುರಸಭೆ ಹಾಗೂ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿರ್ಭಂಧಿತ ಪ್ರದೇಶವೆಂದು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಡೂರು ಪುರಸಭೆಯ ಮತ ಎಣಿಕೆಯು ಸಂಡೂರು ತಾಲೂಕು ಕಚೇರಿಯಲ್ಲಿ, ಹೂವಿನಹಡಗಲಿ ಪುರಸಭೆ ಮತ ಎಣಿಕೆಯು ತಾಲೂಕು ಕಚೇರಿಯಲ್ಲಿ, ಹರಪನಹಳ್ಳಿ ಪುರಸಭೆ ಮತ ಎಣಿಕೆಯು ಹರಪನಹಳ್ಳಿಯ ಶ್ರೀತರಳಬಾಳು (ಆಂಗ್ಲ ಮಾಧ್ಯಮ) ಪ್ರಾಥಮಿಕ ಮತ್ತು ಪ್ರೌಢಶಾಲೆ, ಕಮಲಾಪುರ ಪಟ್ಟಣ ಪಂಚಾಯತಿಯ ಮತ ಎಣಿಕೆಯು ಹೊಸಪೇಟೆಯ ಚಿತ್ತವಾಡ್ಗಿಯ ಪಿ.ಬಿ.ಎಸ್ ಅಂಡ್ ಸನ್ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಮತ ಎಣಿಕೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ದಂಡ ಪಕ್ರಿಯೆ ಸಂಹಿತೆ 1973ರ ಸೆಕ್ಷನ್ 144 ಮತ್ತು ದಂಡ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) 2005ರ ಸೆಕ್ಷನ್ 144 (ಎ)ರಡಿ ಮೇ 31 ರ ಬೆಳಗ್ಗೆ 6 ರಿಂದ ಜೂನ್ 1 ರ ಬೆಳಗ್ಗೆ 6 ಗಂಟೆಯವರೆಗೆ ಮತ ಎಣಿಕೆ ಕೇಂದ್ರಗಳ ಸುತ್ತಲೂ ನಿರ್ಭಂಧಿತ ಪ್ರದೇಶವಾಗಿರುತ್ತದೆ.
ಈ ಅವಧಿಯಲ್ಲಿ ಜಿಲ್ಲೆಯ ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ, ಹೊಸಪೇಟೆ ತಾಲೂಕಿನಾದ್ಯಂತ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ ಸಮಾರಂಭ/ರ್ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಸ್ಪೋಟಕ/ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.