ಡಿ.17ರಂದು ಬೆಳಗಾವಿ ಚಲೋ ಹೋರಾಟ
ಕಂಪ್ಲಿ 16: ಅಧಿವೇಶನದಲ್ಲಿ ಹಳೆಯ ನಿಶ್ಚಿತ ಪಿಂಚಣಿ (ಓ.ಪಿ.ಎಸ್)ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ಡಿ.17ರಂದು ಅನುದಾನಿತರ ನೌಕರರಿಂದ ಬೆಳಗಾವಿ ಚಲೋ ಹೋರಾಟ ಹಮ್ಮಿಕೊಂಡಿದೆ ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿವಂಚಿತ ನೌಕರರ ಸಂಘದ ರಾಜ್ಯ ಸಹಕಾರ್ಯದರ್ಶಿ ಅಂಬಿಗರ ಮಂಜುನಾಥ ತಿಳಿಸಿದರು.
ಅವರು ಪಟ್ಟಣದಲಲಿ ಪತ್ರಿಕಾ ಪ್ರಕಟಣೆ ನೀಡಿ, 2006ರ ಪೂರ್ವ ಸೇವೆಗೆ ಸೇರಿ ಅನುದಾನಕ್ಕೊಳಪಟ್ಟಿರುವ ಹಾಗೂ 2006ರ ನಂತರ ಸೇವೆಗೆ ಸೇರಿ ಅನುದಾನದಕ್ಕೊಳಪಟ್ಟಿರುವ ಅನುದಾನಿತ ಶಾಲೆ ಕಾಲೇಜುಗಳ ನೌಕರರಿಗೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ಕಲ್ಪಿಸಬೇಕಿದೆ.
2022ರ ಅ.7ರಿಂದ 2023ರ ಫೆ.27ರತನಕ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 141ದಿನಗಳ ಹೋರಾಟ ನಡೆಸಿದ್ದು, ಈ ಹೋರಾಟದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರು ಜೀವ ಕಳೆದುಕೊಂಡಿದ್ದರೂ ಸರ್ಕಾರ ಅನುದಾನಿತ ನೌಕರರ ಬೇಡಿಕೆ ಆಲಿಸಲಿಲ್ಲ. ವಿರೋಧಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ತಮ್ಮ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಅನುದಾನರಹಿತ ಅವಧಿಯನ್ನು ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡುವ ಭರವಸೆ ನೀಡಿದ್ದರು. ಮಾತು ಉಳಿಸಿಕೊಳ್ಳುವಲ್ಲಿ ಸಿಎಂ ಸಿದ್ಧರಾಮಯ್ಯ ಮುಂದಾಗುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಅಂತಿಮ ಗಡುವು ನೀಡಲು ಸುವರ್ಣಸೌಧದ ಮುಂಭಾಗದಲ್ಲಿ ಹಮ್ಮಿಕೊಂಡ ಹೋರಾಟದಲ್ಲಿ ಎಲ್ಲಾ ಸಂಘಟನೆಗಳ ನೌಕರರು, ಪಿಂಚಣಿ ವಂಚಿತ ನೌಕರರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.