ಲೋಕದರ್ಶನ ವರದಿ
ಬೆಳಗಾವಿ 12: ಮೊಬೈಲ್ ಎಂಬುದು ಕರ್ಣಪಿಶಾಚಿ ಇದ್ದಂತೆ ಇದು ಇಂದಿನ ಎಲ್ಲ ಕಲೆಗಳನ್ನು ಹಾಳು ಮಾಡುತ್ತಲಿದೆ. ಇದರ ಬಳಿಕೆ ಹಿತಮಿತವಾಗಿರಬೇಕು, ಅವಶ್ಯಕತೆ ಮೀರಿ ಬಳಿಸಬಾರದು ಎಂದು ಸಪ್ತಸ್ವರ ಸಂಗೀತ ವಿದ್ಯಾಲಯದ ನಿರ್ಮಲಾ ಪ್ರಕಾಶ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಲಿ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾದಿನದ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊಬೈಲ್ ಎಂಬ ಮಾಯಾಲೋಕ ಅನಿವಾರ್ಯವೆ? ಎಂಬ ವಿಷಯದ ಮೇಲೆ ಹರಟೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ತಮ್ಮ ಮಾತಿನಿಂದ ಚಾಲನೆ ನೀಡಿದ ನಿರ್ಮಲಾ ಪ್ರಕಾಶ ಮೇಲಿನಂತೆ ಅಭಿಪ್ರಯ ಪಟ್ಟರು
ಯಾರಾದರನ್ನು ಏನು ಮಾತನಾಡಿಸುವುದೆಂಬ ಗೊಂದಲದಲ್ಲಿ ನೀವಿದ್ದರೆ. ಮಾತನಾಡಲು ಭಾಷೆ ಅಡ್ಡ ಬರುತ್ತಿದ್ದರೆ. ಸುಲಭೋಪಾಯವೆಂದರೆ ಒಂದು ಸುಂದರವಾದ ಮುಗುಳ್ನಗೆಯೊಂದನ್ನು ಬೀರಿಬಿಡಿ. ನಗುವಿಗಿಂತ ಉತ್ತಮ ಭಾಷೆ ಬೇರೊಂದಿಲ್ಲ ಎಂದು ಹೇಳಿ, ಪ್ರತಿತಿಂಗಳೂ ತಪ್ಪದೇ 60 ಕಾರ್ಯಕ್ರಮಗಳನ್ನು ನೀಡಿರುವ ಹಾಸ್ಯಕೂಟ ಹೀಗೇ ವಿಜಯಪಥದತ್ತ ಸಾಗಲಿ ಉದಯೋನ್ಮುಖರಿಗೆ ದಾರಿದೀಪವಾಗಲಿ ಎಂದು ಶುಭಹಾರೈಸಿ ತಮ್ಮ ಜೀವನದಲ್ಲಿ ಜರುಗಿದ ನಗೆಪ್ರಸಂಗಗಳನ್ನು ಹಂಚಿಕೊಂಡರು.
ಡಾ. ಹೇಮಾವತಿ ಸೊನೊಳ್ಳಿ, ಸಂಧ್ಯಾ ಜೋಶಿ ಹಾಗೂ ದೀಪಿಕಾ ಚಾಟೆ ಮೊಬೈಲ್ ಅನಿವಾರ್ಯವೆಂದು ಹೇಳುತ್ತ ಮೊದಲು ಯುವಪ್ರೇಮಿಗಳು ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಲು ಹಲವಾರು ವಿಘ್ನಗಳನ್ನು ಎದುರಿಸಿ ಎಲ್ಲರ ಕಣ್ಣುತಪ್ಪಿಸಿ ಮಾತನಾಡಬೇಕಾಗುತ್ತಿತ್ತು. ಇದು ಎಷ್ಟೊಂದು ಸುರಳಿತವಾಗಿ ಮಾತನಾಡುತ್ತಾರೆ. ಇದನ್ನು ನೋಡಿದಾಗ ನಾವೂ ಇನ್ನೂ ಮುವತ್ತು ವರ್ಷ ತಡೆದು ಹುಟ್ಟಬಾರದಿತ್ತೆಂದು ಬೇಸರವಾಗುತ್ತಿದೆ ಎಂದಾಗ ಸಬಾಗೃಹದಲ್ಲಿ ನಗೆಯಲೆ ಎದ್ದವು. ಕಳೆದವರನ್ನು ಹುಡುಕಲು, ಹೊಸರುಚಿ ಕಂಡುಹಿಡಿಯಲು ಅಲ್ಲದೇ ಫೇಸ್ಬುಕ್ ಹಾಗೂ ವಾಟ್ಸಾಫ್ ದಿಂದ ಹಲವಾರು ಸದಭಿರುಚಿಯವರ ಗೆಳೆತನ ಮಾಡಬಹುದು ಹೀಗೆ ಇಂದು ಮೊಬೈಲ್ ಅನಿವಾರ್ಯವಾಗಿ ಬಿಟ್ಟಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಸುಷ್ಮಾ ಜಗಜಂಪಿ, ಭಾರತಿ ಮಠದ ಮತ್ತು ಸುನಿತಾ ಪಾಟೀಲ ಕೊಲ್ಲಾಪೂರೆ ಇವರು ಮೊಬೈಲ್ ನಮ್ಮ ಸಂಸ್ಕೃತಿಯನ್ನೇ ಹಾಳು ಮಾಡತ್ತಲಿದೆ. ಮೊದಲು ಒಬ್ಬರಿಗೊಬ್ಬರು ಭೇಟಿಯಾಗಿ ನಿಜವಾಗಲೂ ಸುಖ ದುಃಖಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಅಂತಃಕರಣ, ಪ್ರೀತಿಯನು ಕತ್ತರಿಸಿ ಕೇವಲ ನಾಟಕೀಯ ಪ್ರೀತಿಯನ್ನು ಮೊಬೈಲ್ ಸೃಷ್ಟಿಸಿದೆ. ಇಂದು ಮನುಷ್ಯರ ಬದಲಾಗಿ ಚಿತ್ರಗಳೇ ಮಾತನಾಡಿಕೊಳ್ಳುತ್ತಲಿವೆ. ಸಂಬಂಧಗಳನ್ನ ಮುರಿಯುವ ಕಾರ್ಯವನ್ನು ಮಾಡುತ್ತಿರುವ ಮೊಬೈಲ್ ಅನಿವಾರ್ಯತೆಯಿಂದ ದೂರ ಉಳಿಯಬೇಕೆಂದು ಹೇಳಿದರು. ಈ ಜುಗಲ ಬಂದಿಯಿಂದ ನಗೆಯೊಂದಿಗೇನೆ ಹಲವಾರು ಸಂದೇಶಗಳನ್ನು ಜನರಿಗೆ ಹರಟೆಗಾರರ ನೀಡಿದರು.
ಸೂತ್ರಧಾರರಾಗಿ ಕಾರ್ಯ ನಿರ್ವಹಿಸಿದ ಸುನೀತಾ ದೇಸಾಯಿ ಇವರು ಮಾತನಾಡಿ ಮೊಬೈಲ್ ಉಪಯೋಗ ಹಾಗೂ ದುರುಪಯೋಗ ಎರಡೂ ಒಂದರಲ್ಲಿಯೇ ಇದ್ದು ಮನುಷ್ಯನು ಇದನ್ನು ಉಪಯೋಗಿಸಿಕೊಳ್ಳುವುದನ್ನು ಅವಲಂಬಿಸಿದೆ. ಮೊಬೈಲ್ದಿಂದ ತಮ್ಮ ಹಾಗೂ ತಮಗೆ ಬೇಕಾದವರ ಛಾಯಚಿತ್ರಗಳನ್ನೂ ಸೆರೆಹಿಡಿಯಬಹುದು ಇದನ್ನೇ ಇನ್ನೊಂದು ರೀತಿಯಲ್ಲಿ ಯೋಚಿಸಿದಾಗ ಫೋಟೋಗ್ರಾಫರನ ಉಪಜೀವನಕ್ಕಿದು ಧಕ್ಕೆ ತಂದಿದೆ. ಇದರಂತೆ ಎಷ್ಟೋ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದು ತಮ್ಮ ಮಾತುಗಳಲ್ಲಿ ಹೇಳಿ ಹರಟೆಗೆ ಮುಕ್ತಾಯ ಹಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಧಾರವಾಡ ಜಿಲ್ಲೆಯ ಮನ್ಸೂರ ಗ್ರಾಮದ ಖ್ಯಾತ ಜಾನಪದ ಕಲಾವಿದೆ ಶಾಂತಾಬಾಯಿ ಬಿ. ಗೌಡರ ಹಾಗೂ ತಂಡದವರು ಜಾನಪದ ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು. ಅಂತರಾಷ್ಟ್ರೀಯ ಮಹಿಳಾ ದಿನದ ನೆನಪಿನಲ್ಲಿ ಈ ಜಾನಪದ ಕಲಾವಿದರ ತಂಡವನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಪ್ರೊ. ಎಂ. ಎಸ್ .ಇಂಚಲ ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಸ್ಯಕೂಟ ಸಂಚಾಲಕರಾದ ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗೆಮಾತುಗಾರ ಎಂ. ಬಿ. ಹೊಸಳ್ಳಿ ನಿರೂಪಿಸಿದರು. ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ ಎಸ್. ವಿ. ದೀಕ್ಷೀತ ಹಾಗೂ ಹಲಗಾದಲ್ಲಿರುವ ಆಯ.ಟಿ.ಆಯ್. ಕಾಲೋಜದ ಎಂ. ಕೆ. ಕಂಗಳಗೌಡ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.