ಬಸವ ತತ್ವವೂ ಜಗತ್ತಿನ ಶ್ರೇಷ್ಠ ತತ್ವವಾಗಿದೆ : ಶಂಕರ ಬಿದರಿ
ಹಾವೇರಿ 10: ಭಾರತದ ಸಂವಿಧಾನದ ಎಲ್ಲಾ ಆಶಯಗಳು, ಬಸವ ತತ್ವದ ಅಂಶಗಳೇ ಆಗಿದ್ದು, ಬಸವ ತತ್ವದ ಪಾಲನೆಯು ಸಂವಿಧಾನದ ಪಾಲನೆಯೇ ಆಗಿದೆ.ಅನುಭವ ಮಂಟಪದ ಮೂಲ ಆಶಯವೇ ಆಧುನಿಕ ಸಂಸತ್ತಿನ ಆಶಯವಾಗಿದ್ದು,ಬಸವ ತತ್ವವೂ ಜಗತ್ತಿನ ಶ್ರೇಷ್ಠ ತತ್ವವಾಗಿದೆ ಎಂದು ನಿವೃತ್ತ ಪೋಲೀಸ್ ಮಹಾನಿರ್ದೇಶಕ ಹಾಗೂ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.
ನಗರದ ಶಿವಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ 79 ನೇ ಹಾಗೂ ಲಿಂ.ಶಿವಲಿಂಗ ಸ್ವಾಮಿಗಳ 16 ನೇ ಪುಣ್ಯ ಸ್ಮರಣೋತ್ಸವದ 4 ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಹಿತದ ಬದಲಾಗಿ ವ್ಯಕ್ತಿಹಿತ ಚಿಂತನೆ ಹೆಚ್ಚಾಗಿದೆ. ಮಹಾತ್ಮರ ಸ್ಮರಣೆಯು ಹಿಂದಿಗಿಂತಲೂ ಇಂದು ತುಂಬಾ ಅವಶ್ಯವಾಗಿದೆ ಎಂದು ಹೇಳಿದರು.
ಬಸವಾದಿ ಶಿವಶರಣರು ಜನರಾಡುವ ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ರಚಿಸಿದರು.ರಾಜಾಶ್ರಯವಿಲ್ಲದೇ ಸಮಾಜವನ್ನು ತಿದ್ದುವ ಕೆಲಸ ಅಂದು ಶರಣರ ಕೊಡುಗೆಯಾಗಿದೆ. ದೇಶ ಕಟ್ಟವ ಅನಿವಾರ್ಯತೆ ಇಂದು ಅವಶ್ಯವಾಗಿದೆ.ರಕ್ತ ಮತ್ತು ಬೆವರು ಹರಿಸಿ ದೇಶ ಸೇವೆ ಮಾಡಬೇಕು. ಕಾಯಕ ಸಿದ್ಧಾಂತ ನಮ್ಮ ಧ್ಯೇಯವಾಗಬೇಕು. ಮತ್ತೆ ಕಲ್ಯಾಣ ರಾಜ್ಯ ನಮ್ಮ ಗುರಿಯಾಗಬೇಕು. ಜಾತ್ರೆಗಳು ಕೇವಲ ನೆಪಗಳು,ಈ ಜಾತ್ರೆ ನೆಪದಲ್ಲಿ ಸತ್ಯ, ಪ್ರೀತಿ,ಕಾಯಕ ತತ್ವ ಜಾಗೃತಗೊಳಿಸಬೇಕು ಎಂದು ಹೇಳಿದರು.
ಧಾರವಾಡದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು ಸಮ್ಮುಖ ವಹಿಸಿದ್ದರು. ಹೆಗಾಪುರ ಶಿವಲಿಂಗೇಶ್ವರ ಹಿರೇಮಠದ ಧಾರುಕಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.ಇದೇ ಸಂದರ್ಭದಲ್ಲಿ ಹಾವೇರಿ ಓಂ ಸಂಸ್ಥೆಯಿಂದ ನೀಡುವ ಸಾಧಕ ರತ್ನ ಪ್ರಶಸ್ತಿಯನ್ನು ಶಿಗ್ಗಾವಿ ಜಾನಪದ ಕಲಾವಿದ ಬಸವರಾಜ ಶಿಗ್ಗಾವಿ ಅವರಿಗೆ ನೀಡಲಾಯಿತು. ಪ್ರೌಢಶಾಲೆ ಕಟ್ಟಡ ದಾನಿಗಳನ್ನು ಸನ್ಮಾನಿಸಲಾಯಿತು. ಕಬನೂರಿನ ಜಾನಪದ ಕಲಾ ತಂಡವು ಜೋಗತಿ ನೃತ್ಯವನ್ನು ಪ್ರದರ್ಶಿಸಿತು.
ಸಮಾರಂಭದಲ್ಲಿ ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ಜಮಖಂಡಿಯ ಓಲೆಮಠದ ಶ್ರೀಗಳು, ಹೊಳಲಿನ ಚನ್ನಬಸವ ದೇವರು, ಸಿ.ಜಿ. ತೋಟಣ್ನವರ, ಸಿ.ಡಿ. ಹಾವೇರಿ, ಎಸ್.ಎಸ್. ಗೌಡಪ್ಪನವರ, ಸ್ನೇಹಾ ಹಿರೇಮಠ, ಚನ್ನಪ್ಪ ಸುರಳಿಹಳ್ಳಿ, ಸಂಜೀವಕುಮಾರ ನೀರಲಗಿ, ಗಂಗಾಧರ ಹತ್ತಿ, ನಿರಂಜನ ಮರಡೂರಮಠ, ರತ್ಮಾ ಪಾಟೀಲ, ಎಸ್.ಎಂ. ಮೆಡ್ಲೇರಿ, ಪ್ರಭಾವತಿ ಪುರದ, ಸಿದ್ಧಲಿಂಗೇಶ ಶೆಟ್ಟರ, ಅಶೋಕ ಮಾಗನೂರ, ಅಮೃತಾ ಶೀಲವಂತರ, ಲಲಿತಕ್ಕ ಹೊರಡಿ, ಗಣೇಶ ಮುಷ್ಠಿ, ಮಾಂತಣ್ಣ ಸುರಳಿಹಳ್ಳಿ, ಆಸಂಗಿ ವೀರಬಸವ ದೇವರು, ಬಿ. ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.
ಬಸವರಾಜ ಚಳಗೇರಾ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ತಮಣ್ಣ ಮುದ್ದಿ ವಂದಿಸಿದರು.