ಬಂಜಾರ, ಬೋವಿ, ಕೊರವ ಸಮಾಜದಿಂದ ಅವೈಜ್ಞಾನಿಕ ಒಳಮೀಸಲಾತಿ ವಿರೋಧಿಸಿ, ಸುವರ್ಣ ಸೌಧ ಚಲೋ ಆಂದೋಲನ: ಸರ್ಕಾರ ವಿರುದ್ಧ ಆಕ್ರೋಶ
ಕಾಗವಾಡ 17: ಅವೈಜ್ಞಾನಿಕವಾಗಿ ಒಳಮೀಸಲಾತಿ ವಿಂಗಡನೆ ಖಂಡಿಸಿ, ತಾಲೂಕಿನ ಬಂಜಾರ, ಬೋವಿ, ಕೊರವ, ಕೊರಮ್ ಸಮುದಾಯದವರು ಮಂಗಳವಾರ ದಿ.17 ರಂದು ಸುವರ್ಣಸೌಧ ಚಲೋ ಆಂದೋಲನ ಹಮ್ಮಿಕೊಂಡು, ಗ್ರಾಮದಲ್ಲಿ ರಾ್ಯಲಿ ನಡೆಸಿ, ಬೆಳಗಾವಿಗೆ ಪ್ರಯಾಣ ಬೆಳೆಸಿದರು. ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ಸುಪ್ರಿಮ್ ಕೋರ್ಟ ನೀಡಿರುವ ಆದೇಶವನ್ನು ನೆಪವಾಗಿಸಿಕೊಂಡು, ಅವೈಜ್ಞಾನಿಕ ಮತ್ತು ಅಸಂವಿಧಾನಿಕ ಒಳಮೀಸಲಾತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ರಾಜ್ಯದ ಅನೇಕ ಸಮುದಾಯಗಳು ರೊಚ್ಚಿಗೆದ್ದು, ಸುವರ್ಣ ಸೌಧದ ಎದುರು ಧರಣಿ ನಡೆಸುತ್ತಿವೆ. ಈ ಧರಣಿಯಲ್ಲಿ ಪಾಲ್ಗೊಳ್ಳಲು ಶಿರಗುಪ್ಪಿಯ ಬಂಜಾರ, ಬೋವಿ, ಕೊರವ, ಕೊರಮ್ ಸಮುದಾಯಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಗ್ರಾಮದಲ್ಲಿ ರಾ್ಯಲಿ ಹಮ್ಮಿಕೊಂಡು, ಬಸ್ ನಿಲ್ದಾಣದಲ್ಲಿ ಸೇರಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಿದರು. ಬಳಿಕ ಬೆಳಗಾವಿಗೆ ಪ್ರಯಾಣಿಸಿದರು. ನ್ಯಾಯವಾದಿ ಮನೋಜ ವಡ್ಡರ ಮಾತನಾಡಿ, ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಒಳಮೀಸಲಾತಿ ವಿಂಗಡನೆಗೆ ಮುಂದಾಗಿದ್ದು, ನಮ್ಮ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರದ ಈ ನಡೆಯನ್ನು ನಾವು ಖಂಡಿಸುತ್ತೇವೆ. ಕೂಡಲೇ ಸರ್ಕಾರ ಅವೈಜ್ಞಾನಿಕ ಒಳಮೀಸಲಾತಿ ವಿಂಗಡನೆಯನ್ನು ಹಿಂಪಡೆಯದೇ ಇದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಲಕ್ಷ್ಮಣ ವಡ್ಡರ, ರಾಮು ವಡ್ಡರ, ಪಂಡಿತ ವಡ್ಡರ, ಬಾಳಾಸಾಬ ಧೋತ್ರೆ, ಅಮೋಲ ವಡ್ಡರ, ಶೆಟ್ಟು ವಡ್ಡರ, ಪ್ರಭು ವಡ್ಡರ, ನಾಮದೇವ ಗಾಡಿವಡ್ಡರ, ಸಿದ್ರಾಮ ಗಾಡಿವಡ್ಡರ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಬಂಜಾರ, ಬೋವಿ, ಕೊರವ, ಕೊರಮ್ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.