ಲಖನೌ, ನ 30 - ಮಾಜಿ ಚಾಂಪಿಯನ್ ಭಾರತದ ರಿತುಪರ್ಣ ದಾಸ್ ಅವರು ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದರು.
ಶನಿವಾರ ನಡೆದ ಮಹಿಳೆಯರ ಸೆಮಿಫೈನಲ್ಸ್ ಪಂದ್ಯದಲ್ಲಿ 23ರ ಪ್ರಾಯದ ರಿತುಪರ್ಣ ಅವರು 22-24, 15-21 ಅಂತರದಲ್ಲಿ ಥಾಯ್ಲೆಂಡ್ ನ ಫಿಟ್ಟಾಯಾಪರ್ನ್ ಚೈವಾನ್ ವಿರುದ್ಧ ನೇರ ಸೆಟ್‍ಗಳಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲುವ ಮಾಜಿ ಚಾಂಪಿಯನ್ ಕನಸು ಭಗ್ನವಾಯಿತು.
ರಿತುಪರ್ಣ ಅವರು 2016 ಹಾಗೂ 2018ರಲ್ಲಿ ಪೂಲಿಷ್ ಓಪನ್ ಚಾಂಪಿಯನ್ ಆಗಿದ್ದರು. ಪ್ರಸಕ್ತ ವರ್ಷದಲ್ಲಿ ದುಬೈ ಇಂಟರ್ ನ್ಯಾಷನಲ್ ಟೂರ್ನಿ ರನ್ನರ್ ಅಪ್ ಆಗಿದ್ದ ವಿಶ್ವದ 40ನೇ ಶ್ರೇಯಾಂಕಿತೆ ಥಾಯ್ಲೆಂಡ್ ವಿರುದ್ಧದ ಆಟಗಾರ್ತಿ ಎದುರು ಮುಖಾಮುಖಿ 0-1 ಹಿನ್ನಡೆ ಹೊಂದಿದ್ದರು. ಕಳೆದ ವರ್ಷ ವಿಯೆಟ್ನಾಂ ಓಪನ್ ಟೂರ್ನಿಯಲ್ಲಿ ಒಂದೇ-ಒಂದು ಬಾರಿ ಮುಖಾಮುಖಿಯಾಗಿ ಸೋಲು ಅನುಭವಿಸಿದ್ದರು.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದ ಆರಂಭದಲ್ಲಿ 0-6 ಹಿನ್ನಡೆ ಅನುಭವಿಸಿದ್ದ ರಿತುಪರ್ಣ, ನಂತರ ಪುಟಿದೆದ್ದು ಒಂದು ಹಂತದಲ್ಲಿ 14-11 ಮುನ್ನಡೆ ಗಳಿಸಿದ್ದರು. ನಂತರ, ಪುಟಿದೆದ್ದ ಚೈವಾನ್ 15-14 ಮುನ್ನಡೆ ಗಳಿಸಿ ಮೊದಲ ಸೆಟ್ ಅನ್ನು ತನ್ನದಾಗಿಸಿಕೊಂಡರು. ನಂತರ ಎರಡನೇ ಸೆಟ್ ನಲ್ಲಿಯೂ ರಿತುಪರ್ಣ ಅವರು 7-3 ಮುನ್ನಡೆ ಗಳಿಸಿದ್ದರು. ನಂತರ, ಪುಟಿದೆದ್ದ ಥಾಯ್ಲೆಂಡ್ ಆಟಗಾರ್ತಿ 12-15 ಅಂತರ ಕಾಯ್ದುಕೊಂಡರು. ಅಂತಿಮವಾಗಿ ಚೈವಾನ್ ಎರಡನೇ ಸೆಟ್ ಗೆದ್ದು ಪಂದ್ಯವನ್ನು ತನ್ನ ಖಾತೆಗೆ ಸೇರಿಸಿಕೊಂಡರು.