ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅರಿವು ಕಾರ್ಯಕ್ರಮ ಹೆಣ್ಣು ಕುಟುಂಬದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಾಳೆ - ಜಿ.ಪಂ.ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ
ಹಾವೇರಿ 04: ಹೆಣ್ಣು ತಾಯಿ, ತಂಗಿ-ಅಕ್ಕ, ಮಡದಿ ಹೀಗೆ ಎಲ್ಲ ಪಾತ್ರಗಳನ್ನು ಜವಾಬ್ದಾರಿಯಿಂದ ನಿಭಾಯಿಸುವ ಮೂಲಕ ತನ್ನ ಕುಟುಂಬದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಾಳೆ. ಹಾಗಾಗಿ ಹೆಣ್ಣೆನ್ನು ಭೂಮಿ ತಾಯಿಗೆ ಹೊಲಿಸಲಾಗುತ್ತದೆ ಎಂದು ಜಿ.ಪಂ.ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013 ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯನ್ನು ಗೌರವಿಸುವ ಮನೆ ನಂದಗೋಕಲವಾಗಿರುತ್ತದೆ. ಯಾವ ಮನೆಯಲ್ಲಿ ಮಹಿಳೆ ಗೌರವ ಇಲ್ಲರುವುದಿಲ್ಲವೋ ಅದು ನರಕವಾಗಿರುತ್ತದೆ. ಹಾಗಿ ಹೆಣ್ಣನ್ನು ಗೌವರದಿಂದ ಕಾಣಬೇಕು ಎಂದು ಹೇಳಿದರು.
ವಕೀಲರಾದ ಶ್ರೀಮತಿ ಕವಿತಾ ಕಿತ್ತೂರ ಅವರು ಮಾತನಾಡಿ, ದೇಶ ಎಷ್ಟೇ ಮುಂದುವರೆದಿದ್ದರೂ ಸಹ ಇಂದು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಧೈರ್ಯವಾಗಿ ಧ್ವನಿ ಎತ್ತಬೇಕು ಹಾಗೂ ದೂರು ನೀಡಲು ಮುಂದೆ ಬರಬೇಕು. ತಮ್ಮ ಕೆಲಸ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸಿದರೆ ಕೂಡಲೇ ಪ್ರತಿಭಟಿಸಬೇಕು ಎಂದರು.
ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ 10 ಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದರೆ ಆಂತರಿಕ ದೂರು ಸಮಿತಿ ಹಾಗೂ 10 ಕ್ಕಿಂತ ಕಡಿಮೆ ಮಹಿಳೆಯರು ಕೆಲಸ ಮಾಡುತ್ತಿದ್ದರೆ ಸ್ಥಳೀಯ ದೂರು ಸಮಿತಿ ರಚಿಸಲಾಗುತ್ತದೆ. ಲೈಂಗಿಕ ದೌರ್ಜನ್ಯ ನಡೆದಾಗ ಕೂಡಲೇ ಸಮಿತಿಗಳ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಮಾತನಾಡಿ, ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯಗಳು ನಡೆದಾಗ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿ ದೂರು ಸಲ್ಲಿಸುವ ಮೂಲಕ ನ್ಯಾಯ ಪಡೆದುಕೊಳ್ಳಬಹುದು. ಈ ಕುರಿತು ಅಧಿಕಾರಿಗಳು ತಮ್ಮ ಕಚೇರಿ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಕಾಯ್ದೆಗಳ ಸದುಪಯೋಗವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಲೈಂಗಿಕ ಕಿರುಕುಳ ತಡೆಯುವ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಮಮತಾ ಹೊಸಗೌಡ್ರ, ಇಡಾರಿ ಸಂಸ್ಥೆ ಅಧ್ಯಕ್ಷರು ಹಾಗೂ ಲೈಂಗಿಕ ಕಿರುಕುಳ ತಡೆಯುವ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿ ಸದಸ್ಯೆ ಪರಿಮಳ ಜೈನ್, ಚೈತನ್ಯ ರೂರಲ್ ಡವಲಮೆಂಟ್ ಸೊಸೈಟಿ ಹಾಗೂ ಲೈಂಗಿಕ ಕಿರುಕುಳ ತಡೆಯುವ ಜಿಲ್ಲಾ ಮಟ್ಟದ ದೂರು ನಿವಾರಣಾ ಸಮಿತಿ ಸದಸ್ಯೆ ಗೀತಾ ಪಾಟೀಲ ಹಾಗೂ ಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಭಾರತಿ ಭಜಂತ್ರಿ ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಪಾಟೀಲ ಸ್ವಾಗತಿಸಿದರು.