ಅಂತಾರಾಷ್ಟ್ರೀಯ ಮಟ್ಟದ ಯೋಗ ಸಮ್ಮಿಲನದಲ್ಲಿ 6ಜನ ಯೋಗಪಟುಗಳಿಗೆ ಪ್ರಶಸ್ತಿ

Awarded to 6 yogis in international level yoga conference

ಅಂತಾರಾಷ್ಟ್ರೀಯ ಮಟ್ಟದ ಯೋಗ ಸಮ್ಮಿಲನದಲ್ಲಿ  6ಜನ ಯೋಗಪಟುಗಳಿಗೆ ಪ್ರಶಸ್ತಿ 

ಹೂವಿನಹಡಗಲಿ 18: ಈಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಗ್ಲೋಬಲ್ ಯೋಗ ಸಮಿತ್‌-2024ರ ಅಂತಾರಾಷ್ಟ್ರೀಯ ಮಟ್ಟದ ಯೋಗ ಸಮ್ಮಿಲನದಲ್ಲಿ ಹೂವಿನಹಡಗಲಿಯ 6 ಯೋಗಪಟುಗಳು ಪ್ರಶಸ್ತಿ ಪಡೆದಿದ್ದಾರೆ ಎಂದು ಸಮಿತಿ ಗೌರವಾಧ್ಯಕ್ಷ ಕೆ. ಕೊಟ್ರೇಶ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲತೇಶ, ಗುರುರಾಜ ಹವಾಲ್ದಾರ್, ಶಾಜನ್ ಬೇಗಂ, ಕಮಲಾ, ಶಿವಮೂರ್ತಯ್ಯ, ಕೆ. ನಾಗರಾಜ ಪ್ರಶಸ್ತಿ ಪಡೆದು, ಮಲ್ಲಿಗೆ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.  

ಯೋಗದ ಮಹತ್ವ ಸಾರುವ ಜತೆಗೆ ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಯೋಗ ಸಮ್ಮಿಲನ ಆಯೋಜಿಸಲಾಗಿತ್ತು. ಇದರಲ್ಲಿ 52 ರಾಷ್ಟ್ರಗಳ ಯೋಗ ಬಂಧುಗಳು ಭಾಗವಹಿಸಿದ್ದರು. ತಾಲೂಕಿನ ಗ್ರಾಮೀಣ ಪ್ರದೇಶಕ್ಕೂ ಯೋಗ ತೆಗೆದುಕೊಂಡು ಹೋಗಿ ಅವರಿಗೆ ಸೂಕ್ತ ತರಬೇತಿ ನೀಡುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆಂದು ಹೇಳಿದರು.  

ಮಾಲತೇಶ ಮಾತನಾಡಿ, ಜೀವನದಲ್ಲಿ ನಿತ್ಯ ಯೋಗ ಮಾಡುವ ಮೂಲಕ ರೋಗಮುಕ್ತ ಸಮಾಜ ನಿರ್ಮಾಣ ಮಾಡಬೇಕಿದೆ. ಅಂತಾರಾಷ್ಟ್ರೀಯ ಯೋಗ ಸಮ್ಮಿಲನದಲ್ಲಿ ಭಾಗವಹಿಸಿದ್ದರಿಂದ ವಿವಿಧ ದೇಶಗಳಿಂದ ಆಗಮಿಸಿದ್ದ ಯೋಗಪಟುಗಳಿಂದ ಮಹತ್ವದ ಜ್ಞಾನ ಲಭಿಸಿದೆ ಎಂದರು. ಶಿವಮೂರ್ತಯ್ಯ ಮಾತನಾಡಿ ಯೋಗ ಕಾರ್ಯಕ್ರಮದಲ್ಲಿ ನುರಿತ ಯೋಗಪಟುಗಳು, ಸಾಧು-ಸಂತರ ಸಮ್ಮಿಲನವಾಗುವ ಜತೆಗೆ ಉತ್ತಮ ಆರೋಗ್ಯ ಹೊಂದಲು ಆಹಾರ ಪದ್ಧತಿ, ವೈಜ್ಞಾನಿಕ ಯೋಗವನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂದರು.ಯೋಗಪಟು ಕಮಲಾ, ಗುರುರಾಜ ಹವಾಲ್ದಾರ್ ಮಾತನಾಡಿದರು. ಎಂ.ಡಿ. ನಿಂಗಪ್ಪ, ಈಟಿ ಹನುಮೇಶ ಉಪಸ್ಥಿತರಿದ್ದರು.