ಮೆಲ್ಬೊರ್ನ್, ಜ.25 : ವಿಶ್ವದ ಎರಡನೇ ಶ್ರೇಯಾಂಕಿತೆ ಆಟಗಾರ್ತಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಪ್ಲಿಸ್ಕೋವಾ ಆಘಾತ ಅನುಭವಿಸಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಇವರು 6-7 (4-7), 6-7 (3-7) ರಿಂದ ರಷ್ಯಾದ ಅನಸ್ತಾಸಿಯಾ ಪಾವ್ಲಿಯುಚೆಂಕೋವಾ ಅವರ ವಿರುದ್ಧ ನಿರಾಸೆ ಕಂಡರು.
ಶುಕ್ರವಾರ ನಡೆದ ಪಂದ್ಯದಲ್ಲಿ 23 ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಮತ್ತು ಹಾಲಿ ಚಾಂಪಿಯನ್ ಮತ್ತು ಜಪಾನ್‌ನ ನವೋಮಿ ಒಸಾಕಾ ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದರು. ಸೆರೆನಾ ಮೂರು ಸೆಟ್‌ಗಳಲ್ಲಿ ಚೀನಾದ ವಾಂಗ್ ಕಿಯಾಂಗ್ ವಿರುದ್ಧ ಸೋತರೆ, ಒಸಾಕಾ ಅವರನ್ನು 15 ವರ್ಷದ ಕೊಕೊ ಗೌಗ್ ಸೋಲಿಸಿದರು.
ಆರನೇ ಶ್ರೇಯಾಂಕಿತ ಸ್ವಿಸ್ ನ ಬೆಲಿಂಡಾ ಬೆನ್ಸಿಚ್ ಸೋಲು ಕಂಡಿದ್ದಾರೆ. ಅವರು 0-6, 1-6 ಎರಡು ನೇರ ಸೆಟ್ ಗಳಲ್ಲಿ ಎಸ್ಟೋನಿಯಾದ ಆನೆಟ್ ಕೊಂಟವೆಟ್ ವಿರುದ್ಧ ಆಘಾತ ಕಂಡರು.
ಸ್ಪೇನ್ ನ ಗಾರ್ಬಿನ್ ಮುಗುರುಜಾ 6-1, 6-2 ರಿಂದ ಎಲಿನ ಸ್ವಿಟೋಲಿನಾ ಅವರನ್ನು, ಜರ್ಮನಿಯ ಎಂಜಿಲಿಕ್ ಕೆರ್ಬರ್ 6-2, 6-7, 6-3 ರಿಂದ ಕ್ಯಾಮಿಲಾ ಜಾರ್ಜಿ ಅವರನ್ನು ಮಣಿಸಿದರು.