ಶ್ರೀಗಳ 16 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಷಟಸ್ಥಳ ಧ್ವಜಾರೋಹಣ
ಹಾವೇರಿ:ರಾಷ್ಟ್ರಧ್ವಜ ದೇಶದ ಏಕ್ಯತೆಯ ಸಂಕೇತವಾದರೆ, ಷಟಸ್ಥಳ ಧ್ವಜ ಧಾರ್ಮಿಕ ಭವ್ಯ ಪರಂಪರೆಯ ದ್ಯೋತಕವಾಗಿದ್ದು, ಷಟ್‌ಸ್ಥಳ ಮಾರ್ಗಗಳು ಸಾಮಾನ್ಯ ಮನುಷ್ಯನನ್ನು ದೇವ ಮಾನವನನ್ನಾಗಿಸುವ, ದೇಹವನ್ನೇ ದೇವಾಲಯ ಮಾಡುವ ಆತ್ಮ ಸಾಕ್ಷತ್ಕಾರದ ದಾರಿ ದೀಪವಾಗಿವೆ ಎಂದು ಶಿರ್ಶಿ ಬಣ್ಣದಮಠದ ಅಟವಿ ಶಿವಲಿಂಗ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಿವಬಸವ ಸ್ವಾಮಿಗಳ 79 ನೇ ಹಾಗೂ ಲಿಂ. ಶಿವಲಿಂಗ ಶ್ರೀಗಳ 16 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಷಟಸ್ಥಳ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ಶರಣ ಸಂಸ್ಕೃತಿಯಲ್ಲಿ ಷಟಸ್ಥಳಗಳು, ಪಂಚಾಚಾರ ಹಾಗೂ ಅಷ್ಟಾವರಣಗಳು ಅವಿಭಾಜ್ಯ ಅಂಗಗಳಾಗಿದ್ದು, ಇವುಗಳ ಪಾಲನೆಯು ಆತ್ಮೋನ್ನತೆಗೆ ಮಾರ್ಗದರ್ಶನವಾಗಿದ್ದು, ಸಾಮಾನ್ಯ ಸಾಧಕನಿಂದ ಅಸಾಮಾನ್ಯ ಶಿವಯೋಗಿ ವರೆಗೆ ದಿವ್ಯ ಬೆಳಕನ್ನು ನೀಡುವ ಚಿಂತಾಮಣಿಯಾಗಿದೆ ಎಂದು ಹೇಳಿದರು. 12 ನೇ ಶತಮಾನದಲ್ಲಿ ಶಿವಶರಣರು ಲಿಂಗಾಂಗ ಸಾಮರಸ್ಯಕ್ಕೆ ಷಟಸ್ಥಳವೇ ಮಾರ್ಗ ಎಂದು ಪ್ರತಿಪಾದಿಸಿದ್ದು, ಸಾಮಾನ್ಯನು ಭಕ್ತನಾಗಿ, ಮಹೇಶನಾಗಿ, ಪ್ರಸಾದಿಯಾಗಿ, ಪ್ರಾಣಲಿಂಗಿಯಾಗಿ, ಶರಣನಾಗಿ ಐಕ್ಯನಾಗುತ್ತಾನೆ. ಇಂಥ ಕ್ರಮಸಮುಚ್ಚಯವನ್ನು ಎಲ್ಲ ಬಸವಾದಿ ಶರಣರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು
ಸಮಾರಂಭದಲ್ಲಿ ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಿಕ್ಕತೊಟ್ಟಲಕೆರೆಯ ಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಿ ತೊರವಿಮಠದ ಚಂದ್ರಶೇಖರ ಸ್ವಾಮೀಜಿ, ತೆಲಂಗಾಣದ ವಿರೂಪಾಕ್ಷ ದೇವರು, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಅಶೋಕ ಮಾಗನೂರ, ಎಂ.ಎಸ್. ಕೋರಿಶೆಟ್ಟರ, ಮಹಾಂತಣ್ಣ ಸುರಳಿಹಳ್ಳಿ, ತಮ್ಮಣ್ಣ ಮುದ್ದಿ, ಅಮೃತಮ್ಮ ಶೀಲವಂತರ, ಗಣೇಶ ಮುಷ್ಠಿ, ಸಿ.ಜಿ. ತೋಟಣ್ಣನವರ, ಶಿವಯೋಗಿ ಬೆನಕೊಪ್ಪ, ಮಾಂತಣ್ಣ ಹಲಗಣ್ಣನವರ, ಗಂಗಣ್ಣ ಮಳಗಿ, ಸೋಮಶೇಖರ ಯಾದವಾಡ, ವೀರಣ್ಣ ಮಹರಾಜಪೇಟೆ, ಪಿ.ಡಿ. ಶಿರೂರ, ಎಸ್.ಎಸ್.ಮುಷ್ಠಿ, ಎಸ್.ವಿ. ಹಿರೇಮಠ, ಡಾ. ಸವಿತಾ ಹಿರೇಮಠ, ಸಿ.ವಾಯ್. ಅಂತರವಳ್ಳಿ, ಎಸ್.ಎನ್. ಕಾಳಿ, ಆರ್. ಎಸ್. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.ರೇಣುಕಾ ಮಡಿವಾಳರ ಪ್ರಾರ್ಥಿಸಿದರು. ಬಿ. ಬಸವರಾಜ ಸ್ವಾಗತಿಸಿದರು. ಎಸ್.ಎನ್. ಮಳೆಪ್ಪನವರ ನಿರ್ವಹಿಸಿದರು.