ಬೆಳಗಾವಿ ; ಕಲೆ ಎನ್ನುವದು ಪ್ರತಿಯೊಬ್ಬರಲ್ಲೂ ಇರುತ್ತದೆ ಅದನ್ನು ಅಭಿವ್ಯಕ್ತಿಗೊಳಿಸಲು ನಾವು ಪ್ರಯತ್ನ ಪಡಬೇಕು, ಸಹೃದಯರು ಕಲೆಯನ್ನು ಆಸ್ವಾದಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಚಿತ್ರ ಕಲಾಕಾರ ವೆಂಕಟೇಶ ಪಾಟೀಲ ನುಡಿದರು.
ಗುರುವಾರ ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನವನ್ನುದ್ದೇಶಿಸಿ ಅವರು ಮಾತನಾಡಿದರು. ಕಲೆಗಳಲ್ಲಿ ಎರಡು ದೇಶಿಯ ಕಲೆ ಹಾಗೂ ಪ್ರದರ್ಶನಾತ್ಮಕ ಕಲೆಗಳನ್ನೊಳಗೊಂಡಿವೆ ನಾಟಕ, ನೃತ್ಯ, ಸಿನೆಮಾ, ಹಾಡುಗಾರಿಕೆ ಇವೆಲ್ಲವೂ ದೇಶಿಯ ಕಲೆಗಳು. ಚಿತ್ರಕಲೆ ಪ್ರದರ್ಶನಾತ್ಮಕ ಕಲೆ ಎಂದು ತಿಳಿಸಿದರು.
ಕಲೆ ಹಾಗೂ ಕಲಾವಿದನಿಗೆ ಆಗುವ ರಸಗ್ರಹಣ ಸಹೃದಯನಿಗೂ ಆಗುವ ರಸಗ್ರಹಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಲಾವಿದ ತನ್ನ ಭಾವಗಳನ್ನು ವಿವಿಧ ಕಲೆಗಳ ಮೂಲಕ ವ್ಯಕ್ತ ಪಡಿಸಬಹುದು ಎಂದು ಹೇಳಿದರು. ಕಲಾ ರಸಗ್ರಹಣದ ಕುರಿತು ಕನ್ನಡ ಸಾಹಿತ್ಯದಲ್ಲಿರುವ ಹಲವು ಉದಾಹರಣೆಗಳನ್ನು ಉಲ್ಲೇಖಿಸಿದರು.
ಆಧುನಿಕ ಚಿತ್ರ ಕಲೆಗಳಲ್ಲಿರುವ ಭಾವಗಳನ್ನು ಸಹೃದಯರು ವಿಭಿನ್ನವಾಗಿ ಅಥರ್ೈಸಿಕೊಳ್ಳಬಹುದು. ಚಿತ್ರಕಲೆಗಳಲ್ಲಿರುವ ಕಾಲ್ಪನಿಕ ಅಂಶಗಳಿಗೂ ಹಾಗೂ ವಾಸ್ತವಿಕ ಅಂಶಗಳಿಗೂ ಹಲವು ಸಾಮ್ಯತೆಗಳಿವೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವೆಂಕಟೇಶ ಪಾಟೀಲ, ಶಿವರಾಜ ಹುಲ್ಲನ್ನವರ, ಆಕಾಶ ಘಾಟಗೆ ಪರಶುರಾಮ ಸನ್ನಿ, ಸಂಗಮೇಶ ಚನ್ನಪ್ಪಗೋಳ ಅವರು ರಚಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಎಂ.ಚನ್ನಪ್ಪಗೋಳ ಸ್ವಾಗತಿಸಿದರು ಡಾ.ಹನುಮಂತ ಮೇಲಿನಮನಿ ವಂದಿಸಿದರು. ಪ್ರೊ.ಸಿದ್ದನಗೌಡ ಕಾರ್ಯಕ್ರಮ ನಿರೂಪಿಸಿದರು.