ವಾರ್ಷಿಕ ಸ್ನೇಹ ಸಮ್ಮೇಳನ: ಕ್ಷೇತ್ರ ಶಿಕ್ಷಣಾಧಿಕಾರಿ ಸಾವಳಗಿ ಸಲಹೆ ಕಠಿಣ ಪರಿಶ್ರಮದಿಂದ ಯಶಸ್ಸು ನಿಮ್ಮದಾಗಿಸಿಕೊಳ್ಳಿ
ತಾಳಿಕೋಟಿ 06: ಯಶಸ್ಸಿನ ಹಿಂದೆ ಬೀಳಬೇಡಿ, ಗುರಿ ಸಾಧನೆಗೆ ಕಠಿಣ ಪರಿಶ್ರಮ ವಹಿಸಿ ಯಶಸ್ಸು ನಿಮ್ಮ ಬಳಿಯೇ ಬರುತ್ತದೆ. ವಿದ್ಯಾರ್ಥಿ ಜೀವನ ಅಮೂಲ್ಯ ಅದನ್ನು ಹಾಳು ಮಾಡದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಬುದುವಾರ ಪಟ್ಟಣದ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಶ್ರೀ ಎಚ್‌ಎಸ್ ವಿದ್ಯಾಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಶುಭ ಕೋರುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಕಲು ಮಾಡುವುದರಿಂದ ದೂರ ಇರಲು ಪ್ರಯತ್ನಿಸಿ, ನಕಲು ಸಮಾಜ ಹಾಗೂ ದೇಶವನ್ನೂ ಹಾಳುಮಾಡುತ್ತದೆ. ನಕಲು ಮುಕ್ತ ಪರೀಕ್ಷೆ ನಡೆಸಲು ಸಂಸ್ಥೆಗಳು ಪ್ರಯತ್ನಿಸಬೇಕು,ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದರು. ಸಮಾರಂಭ ಉದ್ಘಾಟಿಸಿ ತಹಸಿಲ್ದಾರ್ ಕೀರ್ತಿ ಚಾಲಕ್ ಮಾತನಾಡಿ ಇಂದಿನ ಮಕ್ಕಳೇ ದೇಶದ ನಾಳಿನ ನಾಗರಿಕರು,ದೇಶದ ಭವಿಷ್ಯ ಅವರ ಕೈಯಲ್ಲಿದೆ ಅವರು ತಮ್ಮ ಜವಾಬ್ದಾರಿಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಪೋಷಕರು ತಮ್ಮ ಮಕ್ಕಳ ಕುರಿತು ಕಾಳಜಿ ವಹಿಸಬೇಕು.
ಈ ಸಂಸ್ಥೆ ಮುಖ್ಯಸ್ಥರು ಶಿಕ್ಷಣದೊಂದಿಗೆ ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಮಾತನಾಡಿ ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಕೆ ಮುಖ್ಯವಾಗಬಾರದು, ಇದರ ಜೊತೆಗೆ ಪ್ರತಿಭೆ ಹಾಗೂ ಅನುಭವವನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳ ದುಶ್ಚಟಗಳಿಗೆ ಬಲಿಯಾಗಬಾರದು ಇದರಿಂದ ಹೆತ್ತವರ ಹಾಗೂ ಕಲಿತ ಸಂಸ್ಥೆಯ ಹೆಸರು ಹಾಳಾಗುತ್ತದೆ, ಜೀವನದಲ್ಲಿ ಸಂಪತ್ತು ಮಾತ್ರ ಗಳಿಸಿದೇ ಒಳ್ಳೆಯ ಸಂಸ್ಕಾರಗಳನ್ನು ಗಳಿಸಿಕೊಳ್ಳಲು ಪ್ರಯತ್ನಿಸಿ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಎಚ್‌ಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್. ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣಾಧಿಕಾರಿ ಬಿ.ವಾಯ್.ಕವಡಿ, ಹಿರಿಯ ಪತ್ರಕರ್ತ ಜಿ.ಟಿ.ಘೋರೆ್ಡ, ಶಿಕ್ಷಣ ಸಂಯೋಜಕ,ನೋಡಲ್ ಅಧಿಕಾರಿ ಎಂ.ಕೆ.ಬಾಗವಾನ, ಸಿಆರ್ಿ ರಾಜು ವಿಜಾಪುರ, ಶಾಂತಾ ಎಚ್. ಪಾಟೀಲ, ಕಾರ್ಯದರ್ಶಿ ಸಚೀನ ಎಚ್.ಪಾಟೀಲ ಇದ್ದರು. ಶಿಕ್ಷಕ ಸಂತೋಷ ಜಾಮಗೊಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಶ್ರೀದೇವಿ ಪ್ರಾರ್ಥಿಸಿದರು.ಶಿಕ್ಷಕ ಪ್ರಕಾಶ ವಾಲಿಕರ್ ಸ್ವಾಗತಿಸಿದರು. ಶಿಕ್ಷಕರಾದ ಬಿ.ಐ.ಹಿರೆಹೋಳಿ,ಎಸ್.ಸಿ.ಗುಡಗುಂಟಿ,ಗಾಯತ್ರಿ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಎಚ್‌ಎಸ್ ವಿದ್ಯಾ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು, ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.