ಮುಂಬೈ, ಮೇ 8 ಬಾಲಿವುಡ್ ನ ಮಿಸ್ಟರ್ ಇಂಡಿಯಾ ಅನಿಲ್ ಕಪೂರ್, ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಅವರ ಬಯೋಪಿಕ್ ನಲ್ಲಿ ತಮ್ಮ ಪುತ್ರ ಹರ್ಷವರ್ಧನ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಭಿನವ್ ಬಿಂದ್ರಾ ಅವರ ಜೀವನಾಧಾರಿತ ಚಿತ್ರ ನಿರ್ಮಿಸಲಾಗುತ್ತಿದ್ದು, ಅನಿಲ್ ಕಪೂರ್ ಶೀಘ್ರದಲ್ಲಿಯೇ ಮೊದಲ ಬಾರಿಗೆ ತಮ್ಮ ಪುತ್ರ ಹರ್ಷವರ್ಧನ್ ಕಪೂರ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹರ್ಷವರ್ಧನ್ ಕಪೂರ್ ಅವರು ಅಭಿನವ್ ಬಿಂದ್ರಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅನಿಲ್ ಕಪೂರ್, ಅಭಿನವ್ ತಂದೆ ಅಪಜೀತ್ ಪಾತ್ರ ಅಭಿನಯಿಸುತ್ತಿದ್ದಾರೆ. ತಂದೆ - ಮಗನ ಮಧ್ಯೆ ತುಲನೆ ಮಾಡುವ ಹೆದರಿಕೆಯಿಂದ ಹರ್ಷವರ್ಧನ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬ ಸುದ್ದಿ ವದಂತಿ ಅಷ್ಟೇ ಎಂದು ಅನಿಲ್ ಕಪೂರ್ ಹೇಳಿದ್ದಾರೆ. ಒಂದೇ ಕುಟುಂಬದ ಇಬ್ಬರು ಕಲಾವಿದರು ಜೊತೆಯಾಗಿ ತೆರೆ ಮೇಲೆ ಕಾಣಿಸಿಕೊಂಡಾಗ ಪ್ರೇಕ್ಷಕರು ಅವರ ಹಾಗೂ ಅವರ ಕೆಲಸವನ್ನು ತುಲನೆ ಮಾಡುವುದು ಸಾಮಾನ್ಯ ಎಂದು ಅನಿಲ್ ಕಪೂರ್ ಅಭಿಪ್ರಾಯಪಟ್ಟಿದ್ದಾರೆ. "ಚಿತ್ರದಲ್ಲಿನ ಪಾತ್ರವನ್ನು ಸ್ವೀಕರಿಸಲು ನನಗೆ ಒಂದು ಕ್ಷಣ ಕೂಡ ಸಂಕೋಚವಾಗಲಿಲ್ಲ. ನನ್ನ ಜೊತೆ ಕೆಲಸ ಮಾಡಲು ನನ್ನ ಮಗ ಕೂಡ ಸಂಪೂರ್ಣವಾಗಿ ಸಿದ್ಧನಾಗಿದ್ದಾನೆ. ಇದುವರೆಗೆ ಆತ ಎರಡೇ ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ನನ್ನ ಮಗ ಒಲಂಪಿಕ್ ನಲ್ಲಿ ಪ್ರಥಮ ವೈಯಕ್ತಿಕ ಚಿನ್ನ ಗೆದ್ದಿರುವ ಆಟಗಾರನ ಬಯೋಪಿಕ್ ನಲ್ಲಿ ಅಭಿನಯಿಸಲು ಹೊರಟಿದ್ದಾನೆ. ಆತನ ಜೊತೆ ಕೆಲಸ ಮಾಡಲು ಸಂತಸವಾಗುತ್ತಿದೆ ಎಂದು ಅನಿಲ್ ಕಪೂರ್ ಹೇಳಿದ್ದಾರೆ.